Site icon Suddi Belthangady

ಮಹಿಳೆಯ ಜೀವ ರಕ್ಷಿಸಿದ ಕಕ್ಕಿಂಜೆಯ ಕೆ.ಎಂ.ಸಿ ತುರ್ತು ಚಿಕಿತ್ಸಾ ಘಟಕ

ಬೆಳ್ತಂಗಡಿ: ಹೃದಯಾಘಾತಕ್ಕೆ ಒಳಗಾದ ಮಧ್ಯ ವಯಸ್ಸಿನ ಮಹಿಳೆಗೆ ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕದ ವೈದ್ಯರು ಜೀವ ರಕ್ಷಿಸಿದ್ದಾರೆ. ಮೀರಾ ಎಂಬ ಮಧ್ಯ ವಯಸ್ಸಿನ ಮಹಿಳೆಯನ್ನು ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಕೆಎಂಸಿ ನಿರ್ವಹಿಸುವ ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲಾಗಿತ್ತು. ರೋಗಿಯು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಆರೋಗ್ಯ ಸ್ಥಿತಿ ಸಾಕಷ್ಟು ಹದಗೆಟ್ಟಿತ್ತು. ಆಸ್ಪತ್ರೆಗೆ ಆಗಮಿಸಿದ ಕೆಲವೇ ನಿಮಿಷದಲ್ಲಿ ರೋಗಿಗೆ ಹೃದಯಾಘಾತ ಸಂಭವಿಸಿದ್ದು, ಮತ್ತೆರಡು ಬಾರಿ ಹೃದಯಾಘಾತವಾಗಿತ್ತು. ತಕ್ಷಣ ಸಮಯ ಪ್ರಜ್ಞೆ ಮೆರೆದ ತುರ್ತು ಚಿಕಿತ್ಸಾ ವಿಭಾಗದ ತಜ್ಞರು ಕೂಡಲೇ 3 ಸುತ್ತಿನ ಸಿಪಿಆ‌ರ್ ಕೈಗೊಂಡಿದ್ದು ಯಶಸ್ವಿಯಾಗಿ ಎದೆಬಡಿತವನ್ನು ಪುನರುಜ್ಜಿವನಗೊಳಿಸಿದ್ದಾರೆ. ಬಳಿಕ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ರೋಗಿಯ ಆರೋಗ್ಯ ಸ್ಥಿತಿ ಸಮಸ್ಥಿತಿಗೆ ಬಂದ ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.

ರೋಗಿಯ ತಪಾಸಣೆಯಲ್ಲಿ ರಕ್ತದಲ್ಲಿ ಅಧಿಕ ಮಟ್ಟದ ಕಾರ್ಬನ್ ಡೈಆಕ್ರೈಡ್, ರೆಸ್ಪಿರೇಟರಿ ಆಸಿಡೊಸಿಸ್, ಹೃತ್ಕರ್ಣದ ಕಂಪನ ಅನುಭವಿಸುತ್ತಿರುವುದು ಪತ್ತೆಯಾಗಿದೆ. ಚಿಕಿತ್ಸೆ ಆರಂಭಿಸಿದ ವೈದ್ಯರ ತಂಡ ಇಂಟ್ರಾವೆನಸ್ ಆಂಟಿಬಯೊಟಿಕ್ಸ್ ಜೊತೆಗೆ ಚಿಕಿತ್ಸೆ ಆರಂಭಿಸಿದ್ದು ಔಷಧಗಳ ಮೂಲಕ ಹೃತ್ಕರ್ಣದ ಕಂಪನವನ್ನು ನಿಯಂತ್ರಿಸಲಾಗಿದೆ. ನಿರಂತರ ನಿಗಾ ಮತ್ತು ಆರೈಕೆಯಿಂದ ರೋಗಿಯ ಆರೋಗ್ಯ ಸ್ಥಿತಿಯನ್ನು ಸುಧಾರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಕನ್ಸಲೈಂಟ್ ಡಾ. ಬಸವಪ್ರಭು ” ಗ್ರಾಮಾಂತರ ಭಾಗದಲ್ಲಿ ತುರ್ತು ಚಿಕಿತ್ಸಾಘಟಕಗಳಲ್ಲಿ ಸಕಾಲಿಕ ಚಿಕಿತ್ಸೆಗಳ ಮಹತ್ವವನ್ನು ಈ ಪ್ರಕರಣ ತಿಳಿಸುತ್ತದೆ. ಕಕ್ಕಿಂಜೆಯ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ಸೂಕ್ತವಾದ ಸಿಪಿಆರ್. ಉಸಿರಾಟದ ನಿರ್ವಹಣೆ ಹಾಗೂ ರೋಗಿಯ ಆರೋಗ್ಯವನ್ನು ಸಮಸ್ಥಿತಿಗೆ ತರುವ ಕಾರ್ಯ ಮುಂದುವರೆದ ಚಿಕಿತ್ಸೆ ನೀಡುವಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಸಕಾಲಿಕ ನೆರವಿಲ್ಲದೇ ರೋಗಿಯ ಜೀವ ರಕ್ಷಣೆ ಬಹಳ ಕಷ್ಟವಾಗಿತ್ತು” ಎಂದರು.

ಕೆಎಂಸಿ ಆಸ್ಪತ್ರೆಯ ತುರ್ತು ಮೆಡಿಸಿನ್ ವಿಭಾಗದ ಕೃಷ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಮಾತನಾಡಿ, ಗ್ರಾಮಾಂತರ ಪ್ರದೇಶದ ತುರ್ತು ಚಿಕಿತ್ಸಾ ಘಟಕಗಳು ರೋಗಿಯ ಜೀವ ರಕ್ಷಣೆಯಲ್ಲಿ ಮೊದಲ ಸಾಲಿನ ರಕ್ಷಣೆಯಾಗಿ ನಿಲ್ಲುತ್ತವೆ. ರೋಗಿಯ ಎದೆಬಡಿತ ಪುನರುಜೀವನಗೊಳಿಸುವ ಹಾಗೂ ಆರೋಗ್ಯ ಸ್ಥಿರಗೊಳಿಸುವ ಪ್ರಕ್ರಿಯೆ ತ್ವರಿತವಾಗಿ ಸಂಭವಿಸುವುದೋ ಆಗ ರೋಗಿಯು ಬದುಕುಳಿಯುವ ಸಾಧ್ಯತೆಯ ಪ್ರಮಾಣವೂ ಹೆಚ್ಚುತ್ತದೆ. ರೋಗಿಯನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವ ತ್ವರಿತ ನಿರ್ಧಾರ ಹೇಗೆ ಮಹತ್ವವಾಗುತ್ತದೆ ಎಂಬುದಕ್ಕೆ ಮೀರಾ ಅವರ ಪ್ರಕರಣವೇ ಉದಾಹರಣೆ ಎಂದಿದ್ದಾರೆ.

ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ ಮತ್ತು ಕೆಎಂಸಿ ಯಿಂದ ನಿರ್ವಹಿಸಲಾಗುತ್ತಿರುವ ಅಲ್ಲಿನ ತುರ್ತು ಚಿಕಿತ್ಸಾ ಘಟಕ ಜೊತೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಅಡ್ವಾನ್ಸ್‌ಡ್ ಕೇರ್ ನ ಒಗ್ಗಟ್ಟಿನ ವೈದ್ಯಕೀಯ ನೆರವು ಗ್ರಾಮೀಣ ಭಾಗದಲ್ಲೂ ಸಕಾಲಿಕ ಚಿಕಿತ್ಸೆ, ಸೂಕ್ತ ನಿರ್ಧಾರ ರೋಗಿಯ ಜೀವರಕ್ಷಣೆಯಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದರು.

ಕೆಎಂಸಿ ಆಸ್ಪತ್ರೆ ಮಂಗಳೂರಿನ ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ಸಫೀರ್ ಸಿದ್ದೀಕಿ ಮಾತನಾಡಿ ” ಶ್ರೀಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕ ಸುತ್ತಮುತ್ತಲ ಚಾರ್ಮಾಡಿ, ಬಣಕಲ್, ಕೊಟ್ಟಿಗೆರೆ, ಮೂಡಿಗೆರೆ, ಉಜಿರೆ ಭಾಗದಲ್ಲಿ ಎಲ್ಲಾ ರೀತಿಯ ತುರ್ತು ವೈದ್ಯಕೀಯ ಸೇವೆಯನ್ನು ನೀಡುತ್ತಿದೆ ಎಂದರು.
8050880666 ಶ್ರೀ ಕೃಷ್ಣ ಕಕ್ಕಿಂಜೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ದೂರವಾಣಿ ಸಂಖ್ಯೆಯಾಗಿದೆ.

Exit mobile version