ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆ ಸಹಸಂಸ್ಥೆ ಮೂಡಿಗೆರೆ ಹೊಯ್ಸಳ ಹೆಲ್ತ್ ಕೇರ್ ಹಾಗೂ ಮೂಡಿಗೆರೆ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ಮತ್ತು ಹೊಯ್ಸಳ ಯೋಗಕ್ಷೇಮ (ಮನೆ ಬಾಗಿಲಿಗೆ ವೈದ್ಯಕೀಯ ಸೇವೆ) ವಾಹನ ಬಿಡುಗಡೆ ಕಾರ್ಯಕ್ರಮವು ಡಿ. 3ರಂದು ಮೂಡಿಗೆರೆ ಜೆಸಿಐ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವ ಸಿ.ಟಿ. ರವಿ, ಇಂತಹ ಆರೋಗ್ಯ ತಪಾಸಣಾ ಶಿಬಿರವು ಜನರಲ್ಲಿ ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಮತ್ತು ದಿನನಿತ್ಯ ವ್ಯಾಯಾಮ, ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಡಾ.ಅರ್ಪಿತಾ ಸಿಂಹ ಮತ್ತು ಡಾ.ಮುರಳಿಕೃಷ್ಣ ಇರ್ವತ್ರಾಯರ ಸಾಮಾಜಿಕ ಕಳಕಳಿಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೂಡಿಗೆರೆ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೆ ಇಂತಹ ಆರೋಗ್ಯ ತಪಾಸಣಾ ಶಿಬಿರವು ಪ್ರಯೋಜನಕಾರಿಯಾಗಿದೆ, ಆರ್ಥಿಕ ಸಮಸ್ಯೆಯಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ ಇಂತಹ ಆರೋಗ್ಯ ತಪಾಸಣಾ ಶಿಬಿರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಹೊಯ್ಸಳ ಹೆಲ್ತ್ ಕೇರ್ ನ ಆಡಳಿತ ನಿರ್ದೇಶಕಿ ಡಾ.ಅರ್ಪಿತಾಸಿಂಹ ಶಿಬಿರದ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ಆಡಳಿತ ನಿರ್ದೇಶಕ ಡಾ.ಮುರಳಿಕೃಷ್ಣ ಇರ್ವತ್ರಾಯ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಕೃಷ್ಣ ಆಸ್ಪತ್ರೆಯ ಸಹಸಂಸ್ಥೆ ಹೊಯ್ಸಳ ಹೆಲ್ತ್ ಕೇರ್, ವಿವಿಧ ಸಂಘ ಸಂಸ್ಥೆಗಳ ಹಾಗೂ ಮೂಡಿಗೆರೆ ಜನರ ಸಹಕಾರದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ಪ್ರಯೋಜನವಾಗಲಿದೆ, ಹೊಯ್ಸಳ ಹೆಲ್ತ್ ಕೇರ್ ವತಿಯಿಂದ ಮೂಡಿಗೆರೆ ಜನರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿರುವ “ಹೊಯ್ಸಳ ಹೆಲ್ತ್ ಕಾರ್ಡ್” ಬಿಡುಗಡೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾಮಾನ್ಯ ತಪಾಸಣೆ, ವೈದ್ಯರ ಸಮಾಲೋಚನೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ರಿಯಾಯಿತಿ ದರದ ಸೂಕ್ತ ಚಿಕಿತ್ಸೆಗೆ ಸಲಹೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಿಯಾಂಕ, ರೋಟರಿ ಕ್ಲಬ್ ಮೂಡಿಗೆರೆ ಇದರ ಅಧ್ಯಕ್ಷ ಹೆಚ್.ಎಂ. ಪ್ರಸಾದ್, ಕೆಎಂಸಿ ಆಸ್ಪತ್ರೆ ಮಂಗಳೂರಿನ ಜನಸಂಪರ್ಕ ವಿಭಾಗ ಮುಖ್ಯಸ್ಥ ರಾಕೇಶ್, ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ. ಇರ್ವತ್ರಾಯ, ಬಣಕಲ್ ಸಾಯಿಕೃಷ್ಣ ಹೆಲ್ತ್ ಸೆಂಟರ್ ನ ಆಡಳಿತ ನಿರ್ದೇಶಕ ನವೀನ್ ಭಟ್ ತಳವಾರ, ಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ. ಅಲ್ಬಿನ್ ಜೋಸೆಫ್, ಡಾ.ಸಾತ್ವಿಕ್ ಕುದ್ದಣ್ಣಾಯ, ಡಾ.ಚೈತನ್ಯ, ಹೊಯ್ಸಳ ಹೆಲ್ತ್ ಕೇರ್ ನ ಮುಖ್ಯ ವೈದ್ಯಾಧಿಕಾರಿ ಡಾ.ಶಶಿಕುಮಾರ್, ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಹಾಗೂ ಹೊಯ್ಸಳ ಹೆಲ್ತ್ ಕೇರ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಜೀವ ರಕ್ಷಕ ಅಂಬುಲೆನ್ಸ್ ಚಾಲಕರಿಗೆ ಸನ್ಮಾನ ನಡೆಯಿತು. ಎಂ.ಜಿ.ಎಂ ಆಸ್ಪತ್ರೆಯ ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರರಿಗೆ, ಕೆಎಂಸಿ ತುರ್ತು ಚಿಕಿತ್ಸಾ ವಿಭಾಗ – ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇವರ ಸಹಕಾರದೊಂದಿಗೆ,”ಪ್ರಥಮ ಚಿಕಿತ್ಸೆ (First Aid,Basic Life Support) ತರಬೇತಿ ಶಿಬಿರ ಮತ್ತು ಪ್ರಥಮ ಚಿಕಿತ್ಸಾ ಕಿಟ್ (ಫಸ್ಟ್ ಏಡ್ ಬಾಕ್ಸ್) ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ಎಂ.ಸಿ ತುರ್ತು ಚಿಕಿತ್ಸಾ ವಿಭಾಗದ ತಜ್ಞವೈದ್ಯ ಮೋಹನ್, ತುರ್ತು ಸಂದರ್ಭಗಳಲ್ಲಿ ಹಾಗೂ ಇನ್ನಿತರ ಆನಾರೋಗ್ಯದ ಅಥವಾ ಅನಾಹುತಗಳು ಸಂಭವಿಸುವ ಹೃದಯಾಘಾತ, ನೀರಿನಲ್ಲಿ ಮುಳುಗುವುದು, ಅಗ್ನಿ ಅವಘಡ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನಡೆಸಿಕೊಟ್ಟರು ಶಿಬಿರದಲ್ಲಿ ಐನೂರಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಆರೀಶ್ ಕಾರ್ಯಕ್ರಮ ನಿರೂಪಿಸಿ, ಡಾ.ಅರ್ಪಿತಾ ಸಿಂಹ ಧನ್ಯವಾದವಿತ್ತರು.

