Site icon Suddi Belthangady

ಬದನಾಜೆ: ಶಾಲಾ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಜಿರೆ: ಬದನಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ನ. 30ರಂದು ಊರಿನ ಹಿರಿಯರು, ಶಾಲಾ ಹಿರಿಯ ವಿದ್ಯಾರ್ಥಿ ನಿವೃತ್ತ ಶಿಕ್ಷಣ ಸಹಾಯಕ ಬಾಬುಗೌಡ ಬಾಜಿಮಾರು ಬಿಡುಗಡೆ ಮಾಡಿ ಶುಭ ಹಾರೈಸಿದರು.

ಡಿ. 21 ಮತ್ತು 22ರಂದು ಬದನಾಜೆ ಶಾಲಾ ಅಮೃತ ಮಹೋತ್ಸವ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳು, ಊರಿನ ವಿದ್ಯಾಭಿಮಾನಿಗಳ ನೆರವಿನಿಂದ ನಿರ್ಮಾಣ ಮಾಡಿದ ‘ಸುಜ್ಞಾನ ಸಭಾಂಗಣ’ ದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಶಾಸಕರು, ಸಂಸದರು ಸೇರಿದಂತೆ ವಿವಿಧ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಶಾಲಾ ಮಕ್ಕಳಿಂದ ಯಕ್ಷಗಾನ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ಉಜಿರೆಯ ವಿದ್ಯಾರ್ಥಿಗಳಿಂದ ‘ಎಸ್.ಡಿ.ಎಂ.ಕಲಾ ವೈಭವ’ ಮತ್ತು ಸಮಾರೋಪ ಸಮಾರಂಭದ ನಂತರದಲ್ಲಿ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್ ಅಭಿನಯದ ‘ಆಂಟಿ ಬೊಕ್ಕ ಅಂಕಲ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದ್ದು, ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ತಯಾರಿಗಳು ನಡೆಯುತ್ತಿದೆ.

ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ನಂತರ ಆಮಂತ್ರಣ ಪತ್ರಿಕೆಯನ್ನು ವಿವಿಧ ತಂಡಗಳನ್ನು ಮಾಡಿ ಮನೆಮನೆಗೆ ಹಂಚಲಾಯಿತು.

Exit mobile version