Site icon Suddi Belthangady

ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯ ಜಂಟಿ ಆಶ್ರಯದಲ್ಲಿ ಕಾಲೇಜು ವಾರ್ಷಿಕೋತ್ಸವ ಡಿ.1ರಂದು ಕಾಲೇಜು ಆವರಣದಲ್ಲಿ ನೆರವೇರಿತು. ಶಾಸಕ ಹರೀಶ್ ಪೂಂಜ ಅವರು ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಉತ್ತಮ ಫಲಿತಾಂಶ ದಾಖಲಿಸಿದೆ ಎಂದು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸುಕುಮಾರ್ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಎ.ಆರ್.ಟಿ. ಓ. ಬಂಟ್ವಾಳ ಚರಣ್ ಕೆ., ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಬೆಳ್ತಂಗಡಿ ಖ್ಯಾತ ನ್ಯಾಯವಾದಿ ಬಿ.ಕೆ. ಧನಂಜಯ್ ರಾವ್, ಬೆಳ್ತಂಗಡಿ ಟಿವಿಎಸ್ ಮೋಟಾರ್ಸ್ ಮಾಲಕ ರೋನಾಲ್ಡ್ ಲೋಬೊ, ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಸೂರಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ, ನಿವೃತ್ತ ಕಂದಾಯ ನಿರೀಕ್ಷಕ ಪದ್ಮಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿಯ ವಾಮನ ಆಚಾರ್ಯ, ವಿದ್ಯಾರ್ಥಿ ನಾಯಕರಾದ ಕುಮಾರ್ ವೈಭವ ಆಚಾರ್ಯ, ಪ್ರಕೃತಿ, ಸಂಜನಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶೀನಾ ನಾಡೋಳಿ ನಿರ್ದೇಶನದ ವೈದೇಹಿ ವಿರಚಿತ (ಮೂಲ ಶೇಕ್ಸ್ ಪಿಯರ್) ನಾಟಕ ಧಾಂ ಧೂಮ್ ಸುಂಟರಗಾಳಿ ಎಂಬ ನಾಟಕವು ಕಾಲೇಜು ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇತಿಹಾಸ ಉಪನ್ಯಾಸಕ ಆನಂದ ಡಿ. ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ ಗಣೇಶ ರಾಮಚಂದ್ರ ಭಟ್ ಹಾಗೂ ಗಣಿತ ಅಧ್ಯಾಪಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಹೆತ್ತವರು ಭಾಗವಹಿಸಿದ್ದರು. ಕನ್ನಡ ಅಧ್ಯಾಪಕಿ ಪೂರ್ಣಿಮಾ ಕೆ.ಕೆ. ಧನ್ಯವಾದ ಸಲ್ಲಿಸಿದರು.

Exit mobile version