Site icon Suddi Belthangady

ಉಜಿರೆ:ಶ್ರೀ ಧ.ಮಂ.ಅ. ಹಿ.ಪ್ರಾ.ಶಾಲಾ ಶತಮಾನೋತ್ಸವ-ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಕ್ರೀಡಾಕೂಟ-ಶಾಲೆಗಳ ಪ್ರಗತಿಯಲ್ಲಿ ಪೋಷಕರ ಪಾತ್ರ ಮಹತ್ತರವಾದುದು:ಡಾ| ಸತೀಶ್ಚಂದ್ರ ಎಸ್.

ಉಜಿರೆ: ಶ್ರೀ.ಧ.ಮಂ.ಅ.ಹಿ.ಪ್ರಾ.ಶಾಲೆಯಲ್ಲಿ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ವಿಶೇಷ ಕ್ರೀಡಾಕೂಟ ಏರ್ಪಡಿಸಲಾಯಿತು. ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್. ಅವರು ಶತಮಾನೋತ್ಸವ ಸಮಿತಿಯ ಕಾರ್ಯವೈಖರಿಯನ್ನು ಪ್ರಶಂಸಿಸಿ, ಪ್ರತೀ ತಿಂಗಳು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ ಅಭಿನಂದಿಸಿದರು. ಶಾಲೆಯ ಸ್ಥಾಪಕ ಕೃಷ್ಣ ಪಡುವೆಟ್ನಾಯರು, ಡಿ.ರತ್ನವರ್ಮ ಹೆಗ್ಗಡೆಯವರು ಮತ್ತು ಪ್ರಸ್ತುತ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರ ಆಶಯದಂತೆ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆ ಸಾರ್ವಜನಿಕರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ.

ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರು ನಿರಂತರವಾಗಿ ಈ ಶಾಲೆಗೆ ಸಹಕಾರ ನೀಡುತ್ತಾ ಬಂದಿರುತ್ತಾರೆ ಎಂದು ತಿಳಿಸಿದರು. ನಿವೃತ್ತ ಶಿಕ್ಷಕರಾದ ಪ್ರೇಮಲತಾ, ಶಶಿಕಲಾ, ಬಿ.ಸೋಮಶೇಖರ ಶೆಟ್ಟಿ ಮತ್ತು ಜಯಭಾರತಿ ಅವರನ್ನು ಸಮಿತಿಯಿಂದ ಗೌರವಿಸಲಾಯಿತು. ಈ ಕ್ರೀಡಾಕೂಟದ ಸಂಪೂರ್ಣ ವೆಚ್ಚವನ್ನು ಭರಿಸಿ, ಪಾಯೋಜಕತ್ವ ವಹಿಸಿಕೊಂಡಿರುವ ಸಂಧ್ಯಾ ಟ್ರೇಡರ್ಸ್‌ನ ಮಾಲಕ ಯುವ ಉದ್ಯಮಿ ರಾಜೇಶ್ ಪೈ ಮಾತನಾಡಿ, ಶಾಲಾ ಜೀವನದ ಅನುಭವಗಳನ್ನು ಮೆಲಕು ಹಾಕಿ, ಕಲಿಸಿದ ಶಿಕ್ಷಕ- ಶಿಕ್ಷಕಿಯರನ್ನು ನೆನಪಿಸಿ, ಈ ಕಾರ್ಯಕ್ರಮಕ್ಕೆ ಸಹಕರಿಸಲು ಅವಕಾಶ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಅವರು ಸಂಘದಿಂದ ಸುಮಾರು 50,000/-ರೂ ಗಳ ಕುರ್ಚಿಗಳನ್ನು ಶಾಲೆಗೆ ಹಸ್ತಾಂತರಿಸಿದ ದಾಖಲೆಗಳನ್ನು ಮಾನ್ಯ ಕಾರ್ಯದರ್ಶಿಯವರಿಗೆ ನೀಡಿದರು. ಮತ್ತು ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಘದ ಎಲ್ಲಾ ಸದಸ್ಯರ ಪಾಲ್ಗೊಂಡು ಯಶಸ್ವಿಗೆ ಸಹಕರಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭು ಅವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿ ಶುಭ ಹಾರೈಸಿದರು. ಸನ್ಮಾನಿತರ ಪರವಾಗಿ ಪ್ರೇಮಲತಾ ಮತ್ತು ಬಿ.ಸೋಮಶೇಖರ ಶೆಟ್ಟಿಯವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯರು ಮಾತನಾಡುತ್ತಾ, ಶಾಲೆ ಬೆಳೆದು ಬಂದ ರೀತಿ, ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು, ಸ್ಥಾಪಕವಂಶದವರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಯ ಬಗ್ಗೆ ವಿವರಿಸಿ ತಿಳಿಸಿದರು ಮತ್ತು ಶಾಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಳೆದ ಒಂದು ವರ್ಷದ ಪ್ರತೀ ತಿಂಗಳು ಶತಮಾನೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿ, ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಎಲ್ಲರೂ ಭಾಗವಹಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಮುಖ್ಯ ಅತಿಥಿ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್. ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಪ್ರಯೋಜಕರಾಗಿರುವ ರಾಜೇಶ್ ಪೈ ಅವರನ್ನು ಗೌರವಿಸಲಾಯಿತು. ಶತಮಾನೋತ್ಸವ ಸಮಿತಿಯ ಅನಂತಕೃಷ್ಣ ಪಡ್ರೆಟ್ನಾಯ, ಮೋಹನ್ ಶೆಟ್ಟಿಗಾರ್, ಸಮಿತಿಯ ಕಾರ್ಯದರ್ಶಿ ಅಬೂಬಕ್ಕರ್, ಪ್ರತಿಮಾ, ಯು.ಎ. ಹಮೀದ್, ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣನಾಯ್ಕ ಪಿ. ಉಪಸ್ಥಿತರಿದ್ದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾರೀರಿಕ ನಿರ್ದೇಶಕ ಆಟೋಟಗಳ ತೀರ್ಪುಗಾರರಾಗಿ ಸಹಕರಿಸಿದರು. ಕ್ರೀಡಾ ಕೂಟದ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆದು ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ರಾಜೇಶ್ ಪೈ ಧ್ವಜಾರೋಹಣ ಮಾಡಿ, ಶುಭಹಾರೈಸಿದರು. ಬ್ಯಾಂಡ್ ಸೆಟ್‌ನಲ್ಲಿ ಸಹಕರಿಸಿದ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕೂಸಪ್ಪಗೌಡ ಸ್ವಾಗತಿಸಿ, ಕಾರ್ಯಕ್ರಮವನ್ನು ಶಾರೀರಿಕ ಶಿಕ್ಷಕ ಗಿರೀಶ್ ಅವರು ನಿರೂಪಿಸಿದರು. ಅನೇಕ ನಿವೃತ್ತ ಶಿಕ್ಷಕರು ಮತ್ತು ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಗೊಳಿಸಿದರು. ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ ಪಿ. ವಂದಿಸಿದರು.

Exit mobile version