ವೇಣೂರು: ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ OSAAT ಸಂಸ್ಥೆಯ ನೆರವಿನಿಂದ ಐದು ತರಗತಿ ಕೊಠಡಿಗಳು, ಬಾಲಕಿಯರಿಗೆ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ಕೊಠಡಿಯನ್ನು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡುತ್ತಿದ್ದು, ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಈ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಕೆ.ಪಿ.ಎಸ್. ಸಂಸ್ಥೆಯಾಗಿ ಪರಿವರ್ತಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಪ್ರಸ್ತುತ ಸಂಸ್ಥೆಯಲ್ಲಿ 563ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್. ಡಿ. ಎಂ. ಸಿ. ಯ ಅಧ್ಯಕ್ಷರು, ಶಾಲಾ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ, ಸಂಸ್ಥೆಯ ಅತ್ಯುತ್ತಮ ಶಿಸ್ತು, ಸ್ವಚ್ಛ ಪರಿಸರ, ಸಹ ಪಠ್ಯ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಎಲ್ಲವನ್ನು ಪರಿಗಣಿಸಿ ಈ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಅಮೆರಿಕಾ ಮೂಲದ ದಾನಿಗಳಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ.
OSAAT ಸಂಸ್ಥೆಯ 127ನೇ ಯೋಜನೆ ಇದಾಗಿದ್ದು ವೇಣೂರಿನಂತಹ ಗ್ರಾಮೀಣ ಪ್ರದೇಶಕ್ಕೆ ಇದೊಂದು ವರದಾನವೇ ಹೌದು. ಶಾಲೆಯ ಅಗತ್ಯಗಳಲ್ಲಿ ಒಂದಾದ ನೂತನ ಸಭಾಂಗಣವನ್ನು ಸುಮಾರು ರೂ 10 ಲಕ್ಷ ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ನಿರ್ಮಿಸಿದ್ದು ಶಾಸಕರು ಇದನ್ನು ಲೋಕಾರ್ಪಣೆಗೊಳಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್. ಎಸ್. ಎಲ್.ಸಿ ಪರೀಕ್ಷೆಗೆ ಹಾಜರಾದ 230 ವಿದ್ಯಾರ್ಥಿಗಳು ಉತ್ತೀರ್ಣರಾಗಿ ನೂರು ಶೇಕಡ ಫಲಿತಾಂಶ ಬಂದಿದ್ದು ಸಂಸ್ಥೆಯ ಎಲ್ಲಾ ಶಿಕ್ಷಕರನ್ನು ಗೌರವಿಸಿ, ಅಭಿನಂದಿಸಲಾಯಿತು.
ಅದೇ ರೀತಿ ಕಳೆದ ವರ್ಷ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸಂಸ್ಥೆ ಸ್ಥಳಾಂತರಗೊಂಡಾಗ ಹಲವು ಭೌತಿಕ ಸಮಸ್ಯೆಗಳಿಂದ ಕೂಡಿದ್ದು ಎಲ್ಲವನ್ನು ಸರ್ವರ ಸಹಕಾರದಿಂದ ಪರಿಹರಿಸಲು ಕಾರಣರಾದ SDMC ಅಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ಇವರನ್ನು, ನೂತನ ಸಭಾಂಗಣಕ್ಕೆ ಆರ್ಥಿಕ ನೆರವು ನೀಡಿದ ರೋಟರಿ ಕ್ಲಬ್ ಸಿದ್ದಕಟ್ಟೆ ಅಧ್ಯಕ್ಷ ದುರ್ಗಾ ದಾಸ್ ಶೆಟ್ಟಿ, ಹಲವು ವರ್ಷಗಳಿಂದ ಕ್ರೀಡಾಕೂಟಕ್ಕೆ ಸಹಕರಿಸುತ್ತಿರುವ ಮೋಹನ್ ದಾಸ್ ಹೆಗ್ಡೆ, ಉದ್ಯಮಿ ಹಾಗೂ ದಾನಿಗಳಾದ ಮೋಹನ್ ಹೆಗ್ಡೆ ಕರಿಮಣೇಲು ಅವರನ್ನು ಗೌರವಿಸಿ, ಅಭಿನಂದಿಸಲಾಯಿತು.
ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದ ಸುಪ್ರಿಯಾ ಹಾಗೂ 600ಕ್ಕಿಂತ ಹೆಚ್ಚು ಅಂಕ ಪಡೆದ 13 ವಿದ್ಯಾರ್ಥಿಗಳನ್ನು, ರಾಜ್ಯಮಟ್ಟದಲ್ಲಿ ಸಾಧನೆಗೈದ 10 ವಿದ್ಯಾರ್ಥಿಗಳನ್ನು, NMSS ಪರೀಕ್ಷೆ ಉತ್ತೀರ್ಣರಾದ ಆರು ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ OSAAT ಸಂಸ್ಥೆಯ ಅಧಿಕಾರಿಗ ಬಾಲಕೃಷ್ಣ ರಾವ್, ಕಿಶೋರ್ ಕುಮಾರ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಭಾಸ್ಕರ್ ಪೈ, ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ್ ಹೆಗ್ಡೆ, ನಿವೃತ್ತ ಮುಖ್ಯ ಶಿಕ್ಷಕ ಶಿವಶಂಕರ ಭಟ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿಜಯ ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ಸುಧೀರ್ ಭಂಡಾರಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನೇಮಯ್ಯ ಕುಲಾಲ್, ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಉಪ ಪ್ರಾಂಶುಪಾಲ ವೆಂಕಟೇಶ್ ಎಸ್. ತುಳುಪುಳೆ ಸ್ವಾಗತಿಸಿ. ಶಿಕ್ಷಕಿ ಜ್ಯೋತಿ ಜೂಲಿಯೆಟ್ ಡಿಸೋಜಾ, ಸುಶೀಲಾ ಜಿ. ಕಾರ್ಯಕ್ರಮ ನಿರೂಪಿಸಿದರು. ನೆಲ್ಸನ್ ಹೆರಾಲ್ಡ್ ವಂದಿಸಿದರು.

