ಬೆಳ್ತಂಗಡಿ: ‘ವಿದ್ಯಾರ್ಥಿಗಳು ಜ್ಞಾನಾರ್ಜನೆಯೆಡೆಗೆ ಸದಾ ಆಸಕ್ತಿ ಬೆಳೆಸಿಕೊಳ್ಳಬೇಕು. ಪ್ರಪಂಚದಲ್ಲಿರುವ ಉತ್ತಮ ಅವಕಾಶಗಳನ್ನು ತನ್ನದಾಗಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಹೇಳಿದರು.
ಅವರು ನ. 29ರಂದು ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದರು.
‘ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಬುದ್ದಿವಂತರಾಗಿದ್ದಾರೆ. ಆದರೆ ಆ ಬುದ್ದಿವಂತಿಕೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ತಿಳುವಳಿಕೆ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಶಾಲಾ ಕಾಲೇಜಿನಲ್ಲಿ ಸಿಗುವ ಮಾರ್ಗದರ್ಶನವನ್ನು ಪಾಲಿಸಿ ಶಿಸ್ತು ಮತ್ತು ಜವಾಬ್ದಾರಿ ಪರಿಪೂರ್ಣ ಬದುಕನ್ನು ಕಟ್ಟಿಕೊಳ್ಳಬೇಕು’ ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿ ಗೌರವಾಧ್ಯಕ್ಷೆ ಸುಜಿತಾ ವಿ. ಬಂಗೇರ ಮಾತನಾಡಿ, ‘ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದ ದಿ. ಕೆ. ವಸಂತ ಬಂಗೇರರಿಗೆ ಇಡೀ ಸಮಾಜವೇ ಬೆಂಬಲವಾಗಿ ಇದ್ದದ್ದರಿಂದ ಸಂಸ್ಥೆ ಬೆಳೆಯಲು ಸಾಧ್ಯವಾಯಿತು. ಮುಂದೆಯೂ ಕಾಲೇಜನ್ನು ಬೆಳೆಸುವಲ್ಲಿ ಸಮಾಜದ ಸಂಘ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಬೇಕು’ ಎಂದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಮಾತನಾಡಿ, ‘ ದಿವಂಗತ ಕೆ. ವಸಂತ ಬಂಗೇರರಿದ್ದ ಸಂದರ್ಭದಲ್ಲಿ ಸಂಘ ಮತ್ತು ಕಾಲೇಜಿನ ಮಧ್ಯೆ ಅವಿನಾಭಾವ ಸಂಬಂಧವಿತ್ತು. ಅವರ ಅಗಲಿಕೆ ಸಂಘ ಹಾಗೂ ಕಾಲೇಜಿಗೆ ಬರಿಸಲಾರದ ನಷ್ಟವಾಗಿದೆ. ಈ ಎರಡೂ ಸಂಸ್ಥೆಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಮೂಲಕ ಅವರ ಕನಸನ್ನು ಸಾಕಾರ ಮಾಡಬೇಕಾಗಿದೆ’ ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಪ್ರಿತಿತ ಧರ್ಮವಿಜೇತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಾದ ದೀಕ್ಷಿತ್, ದೀಪಕ್, ಉಪಾಧ್ಯಕ್ಷೆ ಖುಷಿ, ಕಾರ್ಯದರ್ಶಿಗಳಾದ ಧನ್ಯ ಹಾಗೂ ದಿಯಾ ಇದ್ದರು.
ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಬಿ.ಎ.ಶಮೀವುಲ್ಲಾ ವರದಿ ವಾಚಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಅಶ್ವಿನಿ ಪರಿಚಯಿಸಿ, ಆಂಗ್ಲಭಾಷಾ ಉಪನ್ಯಾಸಕಿ ಮಲ್ಲಿಕಾ ಟಿ ಸಂದೇಶ ವಾಚಿಸಿದರು. ಉಪನ್ಯಾಸಕರಾದ ಸುಷ್ಮಾ, ಪ್ರದ್ವಿತಾ, ಹರೀಶ್ ಪೂಜಾರಿ, ಸತೀಶ್, ಅನನ್ಯ, ಅಕ್ಷತಾ, ಶುಭಲಕ್ಷ್ಮೀ, ನಂದಿನಿ ಶರ್ಮಾ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಕನ್ನಡ ಭಾಷಾ ಉಪನ್ಯಾಸಕ ಗಣೇಶ್ ಬಿ. ಶಿರ್ಲಾಲು ಹಾಗೂ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ. ವಂದಿಸಿದರು.

