Site icon Suddi Belthangady

ಉಜಿರೆಯ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ-9 ದೇಶದ ವಿವಿಧ ಸಂಶೋಧಕರಿಂದ ಪ್ರಬಂಧ ಮಂಡನೆ-ತಂತ್ರಜ್ಞಾನಗಳಲ್ಲಿನ ಸಂಶೋಧನಾ ಸವಾಲು ಮತ್ತು ಪ್ರಗತಿಯ ಕುರಿತು ಚರ್ಚೆ-ತಂತ್ರಜ್ಞಾನದ ಬದಲಾವಣೆ & ಬೆಳವಣಿಗೆಯೊಂದಿಗೆ ಹೆಜ್ಜೆ ಹಾಕೋಣ: ಪೂರನ್ ವರ್ಮ

ಉಜಿರೆ: ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಗೂ ಬೆಂಗಳೂರು ವಿಭಾಗದ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ಸಹಯೋಗದಲ್ಲಿ ಎಸ್.ಡಿ.ಎಂ ಐಟಿ ಕಾಲೇಜಿನಲ್ಲಿ ಆಯೋಜಿಸಲಾದ ಎರುಡು ದಿನಗಳ (ETCOM- 2025) ಕಂಪ್ಯೂಟಿಂಗ್ ಮತ್ತು ಸಂವಹನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ ನಡೆಯಿತು.

ಅಂತರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ನ ಕ್ಲಸ್ಟರ್ ಮುಖ್ಯಸ್ಥ ( ಕೆಡಿಇಎಮ್) ವೆಂಕಟೇಶ್ ದೇಶ್ಪಾಂಡೆ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು, ಯುವ ಸಂಶೋಧಕರು ಈ ದೇಶದ ಚಾಲಕ ಶಕ್ತಿಗಳು, ಭವಿಷ್ಯದ ರಾಷ್ಟ್ರವನ್ನು ನಿರ್ಮಿಸುವ ಎಲ್ಲಾ ಅವಕಾಶ ಮತ್ತು ಸಾಮಾರ್ಥ್ಯ ನಿಮ್ಮೊಳಗಿದೆ. ಈ ಸಮಾಜ ಮತ್ತು ದೇಶದ ಬೆಳವಣಿಗೆ ಹೊಸ ಹೊಸ ಸಂಶೋಧನೆಗಳು, ಚಿಂತನೆಗಳು, ವಿಮರ್ಶೆಗಳು ನಡೆದಾಗ ಮಾತ್ರ ಸಾಧ್ಯವಾಗುತ್ತದೆ. ಯುವ ಸಮುದಾಯದ ಕೊಡುಗೆ ಅತ್ಯಂತ ಅಮೂಲ್ಯ ಮತ್ತು ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದ ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪೂರನ್ ವರ್ಮ ಮಾತನಾಡಿ, ನಾವು ಇಂದು ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ಪ್ರತಿ ನಿತ್ಯ ತಂತ್ರಜ್ಞಾನದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಇದರ ಮಾಹಿತಿ ಮತ್ತು ಬಳಕೆಯ ಉಪಯೋಗಗಳನ್ನು ಅರಿತುಕೊಳ್ಳಬೇಕು. ನೂತನ ಆವಿಷ್ಕಾರಗಳ ಜೊತೆಗೆ ಹೊಂದಿಕೊಂಡು ಹೋಗುವ ಕ್ಷಮತೆಯನ್ನು ಬೆಳೆಸಿಕೊಳ್ಳಬೇಕು. ರಿಮೋಟ್ ಕಂಟ್ರೋಲ್ ನಲ್ಲಿ ಇದ್ದ ತಂತ್ರಜ್ಞಾನ ನಮ್ಮ ಮೆದುಳಿನ ವರೆಗೂ ಬಂದುಬಿಟ್ಟಿದೆ. ತಂತ್ರಜ್ಞಾನದ ಬದಲಾವಣೆ ಮತ್ತು ಬೆಳವಣಿಗೆಯೊಂದಿಗೆ ಸದಾ ಹೆಜ್ಜೆ ಹೆಜ್ಜೆ ಹಾಕಬೇಕು. ತಂತ್ರಜ್ಞಾನ ಪರಿಣಿತಿಯ ಜೊತೆಗೆ ನಮ್ಮ ವೃತ್ತಿ ಬದುಕಿನ ಮತ್ತು ವೈಯಕ್ತಿಕ ಬದುಕಿನ ಸಮಸ್ಯೆ ಹಾಗು ಸವಾಲುಗಳಿಂದ ಪಾರಾಗಲು ಉತ್ತಮ ಸಂವಹನ ಮತ್ತು ಸಹಭಾಗಿತ್ವ ಅವಶ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಮಾತನಾಡಿ, ತಂತ್ರಜ್ಞಾನ ಅಗತ್ಯ, ಆದರೆ ಅದರ ಸದುಪಯೋಗ ಪಡಿಸಿಕೊಂಡು ದುರುಪಯೋಗಗಳಿಗೆ ಬಲಿಯಾಗದಂತೆ ನಮ್ಮನ್ನು ನಾವು ಜಾಗೃತೆ ವಹಿಸಬೇಕು. ತಂತ್ರಜ್ಞಾನದಲ್ಲಿ ನಾವು ಎಷ್ಟು ಮುಂದುವರಿದರೂ ಮಾನವೀಯ ಮೌಲ್ಯಗಳು ಮತ್ತು ಮನುಷ್ಯ ಭಾವನೆಯನ್ನು ಮೂಲೆಗುಂಪು ಮಾಡಬಾರದು ಎಂದರು.

ಕಾರ್ಯಕ್ರಮದಲ್ಲಿ ಕಂಪ್ಯೂಟಿಂಗ್ ಮತ್ತು ಸಂವಹನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತಾದ ಸಂಶೋಧನಾ ಲೇಖನಗಳ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ 2024 ರ ಮಹಿಳಾ ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷರು ಮತ್ತು ಐಇಇಇ ಮಂಗಳೂರು ಉಪವಿಭಾಗದ ಮಾಜಿ ಉಪಾಧ್ಯಕ್ಷೆ ಅಶ್ವಿನಿ ವಿ ಆರ್ ಹೊಳ್ಳ, ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕರಾದ ಡಾ. ಬಸವ ಮತ್ತು ಡಾ. ಪ್ರತಾಪ್ ಚಂದ್ರ ಉಪಸ್ಥಿತರಿದ್ದರು.

ವಿಚಾರ ಸಂಕಿರಣದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಪ್ರಸಿದ್ಧಿಯನ್ನು ಪಡೆದಿರುವ ಸಂಶೋಧಕರಾದ ಸಾಯಿ ಕೃಷ್ಣ, ಶ್ರೀಕಾಂತ್ ರೆಡ್ಡಿ ಗುಡಿ, ವೇಂಕಟೇಶ್ ದೇಶ್ಪಾಂಡೆ ಮತ್ತು ಸತ್ಯ ಮಹೇಶ್ ವೀರ ಪನೇನಿಯವರಿಂದ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಡಾ. ಸಂದೀಪ್ ನಿರೂಪಿಸಿ, ಉಪನ್ಯಾಸಕ ಡಾ. ಪ್ರತಾಪ್ ಚಂದ್ರ ವಂದಿಸಿದರು.

Exit mobile version