Site icon Suddi Belthangady

ಚಿನ್ನಯ್ಯಗೆ ಷರತ್ತುಬದ್ಧ ಜಾಮೀನು ಮಂಜೂರು೧೨ ಷರತ್ತುಗಳನ್ನು ವಿಧಿಸಿದ ಸೆಷೆನ್ಸ್ ಕೋರ್ಟ್

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಸಾಕ್ಷಿ ದೂರುದಾರ ಹಾಗೂ ಬಳಿಕ ಆರೋಪಿಯಾಗಿ ಬಂಧನಕ್ಕೆ ಒಳಗಾದ ಚಿನ್ನಯ್ಯನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ.೨೪ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ೧ ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ೧೨ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ತಲೆಬುರುಡೆ ಕೇಸ್‌ನಲ್ಲಿ ಚಿನ್ನಯ್ಯನನ್ನು ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಕಾರಣ ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಷರತ್ತುಗಳೇನು?: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತಿಲ್ಲ, ತಪ್ಪಿಸಿಕೊಳ್ಳಬಾರದು, ಬೆದರಿಕೆ, ಪ್ರಚೋದನೆ ಅಥವಾ ಇತರ ರೀತಿಯಲ್ಲಿ ಸಾಕ್ಷಿಗಳನ್ನು ನಾಶ ಮಾಡುವಂತಿಲ್ಲ. ತನಿಖಾಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಿ ಸಹಕರಿಸಬೇಕು. ನ್ಯಾಯಾಲಯದ ವಿಚಾರಣೆಗೆ ತಪ್ಪದೆ ಹಾಜರಾಗಬೇಕು, ಬಾಂಡ್‌ಗಳನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ಜಾಮೀನುದಾರರನ್ನು ಹಾಜರುಪಡಿಸಬೇಕು, ವಾಸಸ್ಥಳ ವಿಳಾಸವನ್ನು ಒದಗಿಸಬೇಕು ಮತ್ತು ವಿಳಾಸದಲ್ಲಿ ಬದಲಾವಣೆಯಾಗಿದ್ದರೆ ನ್ಯಾಯಾಲಯಕ್ಕೆ ತಿಳಿಸಬೇಕು, ಮೊಬೈಲ್ ಸಂಖ್ಯೆ, ವಾಟ್ಸ್‌ಆಪ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಒದಗಿಸಬೇಕು, ಪೂರ್ವಾನುಮತಿಯಲ್ಲದೆ ನ್ಯಾಯಾಲಯದ ವ್ಯಾಪ್ತಿಯನ್ನು ಬಿಡಬಾರದು. ಸಾಮಾಜಿಕ ಮಾಧ್ಯಮ, ಟಿ.ವಿ. ಚಾನೆಲ್‌ಗಳು, ಪತ್ರಿಕೆ ಮತ್ತು ಇತರ ಮಾಧ್ಯಮಗಳಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ಯಾವುದೇ ರೀತಿಯ ಸಂದರ್ಶನ, ಹೇಳಿಕೆಯನ್ನು ನೀಡಬಾರದು, ಜಾಮೀನಿನ ಮೇಲೆ ಬಿಡುಗಡೆಯಾದ ದಿನಾಂಕದಿಂದ ಅಂತಿಮ ವರದಿ ಸಲ್ಲಿಸುವವರೆಗೆ ಪರ್ಯಾಯ ದಿನಗಳಲ್ಲಿ ಸಂಬಂಧಪಟ್ಟ ಠಾಣೆಯಲ್ಲಿ ಹಾಜರಾತಿ ದಾಖಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ: ಸೋಮವಾರ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಈ ವಿಚಾರಣೆಯ ಸಂದರ್ಭದಲ್ಲೇ ಮಂಗಳೂರು ಜಿಲ್ಲಾ ನ್ಯಾಯಾಲಯ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಿದೆ. ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ವರದಿಯ ಭಾಗವಾಗಿ ಶುಕ್ರವಾರ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾದರೂ ವರದಿಗಿಂತಲೂ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆಗೆ ಬಂದು ಕಲಾಪ ನ. ೨೪ಕ್ಕೆ ಮುಂದೂಡಲ್ಪಟ್ಟಿತ್ತು. ಎಸ್‌ಐಟಿ ಅಧಿಕಾರಿಗಳು ನ. ೨೦ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದ ಬಳಿಕ ಆರೋಪಿ ಚಿನ್ನಯ್ಯನಿಗೆ ಜಾಮೀನು ನೀಡಲು ಆತನ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ವಿಚಾರವಾಗಿ ಶುಕ್ರವಾರ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರ ಮುಂದೆ ಎಸ್‌ಐಟಿ ಪರ ಸರಕಾರಿ ವಕೀಲ ದಿವ್ಯರಾಜ್ ಹೆಗ್ಡೆ ಹಾಗೂ ಚಿನ್ನಯ್ಯ ಪರ ವಕೀಲರು ತಮ್ಮ ವಾದಗಳನ್ನು ಮಂಡಿಸಿದ್ದರು. ಬಳಿಕ ನ್ಯಾಯಾಲಯದ ಕಲಾಪವನ್ನು ನ.೨೪ಕ್ಕೆ ಮುಂದೂಡಲಾಗಿತ್ತು. ಎಸ್‌ಐಟಿ ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಜತೆಗೆ ಮುಂದಿನ ತನಿಖೆಗೆ ನಿರ್ದೇಶನ ನೀಡಲು ವಿನಂತಿಸಿ ನ್ಯಾಯಾಧೀಶರ ಮುಂದೆ ಎಸ್‌ಐಟಿ ಪರ ವಕೀಲ ದಿವ್ಯರಾಜ್ ಹೆಗ್ಡೆ ವಾದ ಮಂಡಿಸಿದ್ದು ನ್ಯಾಯಾಲಯ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಅದರಂತೆ ಶುಕ್ರವಾರ ಸಂಜೆ ಎಸ್‌ಐಟಿಯ ಡಿವೈಎಸ್ಪಿ ಲೋಕೇಶ್ ಹಾಗೂ ಇತರ ಸಿಬಂದಿ ಆಗಮಿಸಿದ್ದರು. ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಅಂಶಗಳ ಚರ್ಚೆಗೂ ಮುನ್ನಾ ಚಿನ್ನಯ್ಯನ ಪರ ವಕೀಲರು ವಾದ ಮಂಡಿಸಿದ್ದು ಇನ್ನೂ ಕೂಡ ದೋಷಾರೋಪಣಾ ಪಟ್ಟಿ ಸಲ್ಲಿಕೆ ಮಾಡದೇ ಇರುವ ವಿಚಾರವನ್ನು ಪ್ರಸ್ತಾವಿಸಿದ್ದರು. ಜತೆಗೆ ಚಿನ್ನಯ್ಯ ಜಾಮೀನಿನ ಅರ್ಜಿ ವಿಚಾರವೂ ಪ್ರಸ್ತಾವಕ್ಕೆ ಬಂದು ವಾದ-ಪ್ರತಿವಾದಗಳು ನಡೆದು ಕೊನೆಗೆ ಕಲಾಪ ನ.೨೪ಕ್ಕೆ ಮುಂದೂಡಲ್ಪಟ್ಟಿತ್ತು. ನ.೨೪ರಂದು ಮತ್ತೆ ವಾದ ಪ್ರತಿವಾದ ಜೋರಾಗಿ ನಡೆಯಿತಾದರೂ ಆ ವೇಳೆಗಾಗಲೇ ಮಂಗಳೂರು ನ್ಯಾಯಾಲಯ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಿತ್ತು.

Exit mobile version