ಬೆಳ್ತಂಗಡಿ: ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದವರ ಶವಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ರಾಜ್ಯ ಸರಕಾರದಿಂದ ರಚಿಸಲ್ಪಟ್ಟಿರುವ ವಿಶೇಷ ತನಿಖಾ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ನ.೨೦ರಂದು ಮಧ್ಯಂತರ ವರದಿ ಸಲ್ಲಿಸಿದೆ. ಕಥೆ ಕಟ್ಟುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಕೆಡಿಸುವ ಷಡ್ಯಂತ್ರ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬುರುಡೆ ಪ್ರಕರಣದ ರೂವಾರಿಯಾಗಿರುವ ಚಿನ್ನಯ್ಯನನ್ನು ಪ್ರಮುಖ ಸೂತ್ರಧಾರಿ ಎಂದು ಎಸ್‌ಐಟಿ ವರದಿಯಲ್ಲಿ ಹೆಸರಿಸಲಾಗಿದ್ದು ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ವಿಠಲ ಗೌಡ ಪಾಂಗಳ ಮತ್ತು ಸುಜಾತ ಭಟ್ ಅವರನ್ನು ಷಡ್ಯಂತ್ರದ ಪಾಲುದಾರರು ಎಂದು ಉಲ್ಲೇಖಿಸಲಾಗಿದೆ.
ಎಸ್‌ಐಟಿ ನಡೆಸಿರುವ ತನಿಖೆಯ ಸಮಗ್ರ ವಿವರವನ್ನು ಒಳಗೊಂಡ 3,923 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ದೋಷಾರೋಪಣಾ ಪಟ್ಟಿಯನ್ನು ಇನ್ನಷ್ಟೇ ಸಲ್ಲಿಸಬೇಕಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಎಸ್‌ಐಟಿ ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ವರದಿಯನ್ನು ಬಹಿರಂಗ ಮಾಡದಂತೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರು ಸೂಚನೆ ನೀಡಿದ್ದು ಮೂಲಗಳಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿದೆ.
3,923 ಪುಟಗಳ ವರದಿ ಸಲ್ಲಿಸಿದ ಎಸ್‌ಐಟಿ: ಧರ್ಮಸ್ಥಳ ಮತ್ತು ಆಸುಪಾಸಿನ ಗ್ರಾಮದಲ್ಲಿ ನಡೆದಿರುವ ಕೊಲೆ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದವರ ಮೃತದೇಹಗಳನ್ನು ತನಗೆ ನಿರಂತರವಾಗಿ ಬೆದರಿಕೆ ಹಾಕಿ ಹೂತು ಹಾಕಿಸಲಾಗಿದೆ ಎಂದು ಈ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸ್ವಚ್ಛತಾ ವಿಭಾಗದ ಕಾರ್ಮಿಕನಾಗಿದ್ದ ಮಂಡ್ಯ ಮೂಲದ ಚಿನ್ನಯ್ಯ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿರುವ ದೂರು, ಈ ದೂರಿನ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಆರಂಭದಲ್ಲಿ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆ ಪಡೆದು ತಮ್ಮ ವಕೀಲರೊಂದಿಗೆ ಮುಸುಕುಧಾರಿಯಾಗಿ ಆಗಮಿಸಿ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ನೀಡಿರುವ ಗುಪ್ತ ಹೇಳಿಕೆ, ನ್ಯಾಯಾಧೀಶರ ಎದುರು ಹಾಜರಾಗುವ ವೇಳೆ ಮಾನವನ ಮೃತದೇಹವೊಂದರ ತಲೆ ಬುರುಡೆ ತಂದಿರುವುದು, ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು, ಪೊಲೀಸರು ಮತ್ತು ವಕೀಲರ ಸಮ್ಮುಖದಲ್ಲಿ ತಲೆ ಬರುಡೆಯನ್ನು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದು, ಆನಂತರದ ಬೆಳವಣಿಗೆಯಲ್ಲಿ ರಾಜ್ಯ ಸರಕಾರ ಈ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡವನ್ನು ರಚಿಸಿರುವುದು, ಬಳಿಕ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿರುವುದು, ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯನ ಗುರುತು ಬಹಿರಂಗವಾಗದಂತೆ ಮುನ್ನೆಚ್ಚರಿಕೆ ವಹಿಸಿ ಧರ್ಮಸ್ಥಳ ಗ್ರಾಮದ 17 ಸ್ಥಳಗಳಲ್ಲಿ ಉತ್ಖನನ ನಡೆಸಿರುವುದು, ಎಸ್‌ಐಟಿ ತನಿಖೆಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು, ಬೆಳ್ತಂಗಡಿ ತಹಶೀಲ್ದಾರರು, ಪೊಲೀಸ್ ಇಲಾಖೆ, ಎಫ್‌ಎಸ್‌ಎಲ್ ತಂಡ ಸಹಿತ ವಿವಿಧ ವಿಭಾಗದ ಅಧಿಕಾರಿಗಳು ತನಿಖೆಗೆ ಸಹಕಾರ ನೀಡಿರುವುದು, ಪಂಚ ಸಾಕ್ಷಿದಾರರು, ಕೂಲಿ ಕಾರ್ಮಿಕರು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು, ಉತ್ಖನನದ ವೇಳೆ ಮಾನವನ ಮೂಳೆಗಳು ದೊರೆತಿರುವುದು, ಅದನ್ನು ಸುಭದ್ರವಾಗಿ ಸಂರಕ್ಷಿಸಿರುವುದು, ಚಿನ್ನಯ್ಯ ಮಾತ್ರವಲ್ಲದೆ ಇತರ ಕೆಲವರು ಸಂಶಯಾಸ್ಪದ ಸಾವುಗಳ ಕುರಿತು ದೂರು ನೀಡಿರುವುದು, ಅಧಿಕಾರಿಗಳು ಸ್ಥಳ ಮಹಜರು ನಡೆಸಿರುವುದು ಇತ್ಯಾದಿ ಮಾಹಿತಿಗಳನ್ನು ಒಳಗೊಂಡ ೩,೯೨೩ ಪುಟಗಳ ವರದಿಯನ್ನು ವಿಶೇಷ ತನಿಖಾ ತಂಡದ ಮುಖ್ಯ ತನಿಖಾಧಿಕಾರಿಯಾಗಿರುವ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯ ಸುಳ್ಳು ದೂರು ನೀಡಿರುವುದು, ಇಲಾಖೆಗೆ ತಪ್ಪು ಮಾಹಿತಿ ನೀಡಿರುವುದು, ಸಾಕ್ಷ್ಯಗಳನ್ನು ಮರೆ ಮಾಚಿರುವುದು, ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿರುವುದು, ಮಾನವನ ತಲೆ ಬರುಡೆಯನ್ನು ಬೆಂಗಳೂರಿಗೆ, ದೆಹಲಿಗೆ ಕೊಂಡು ಹೋಗಿರುವುದು, ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯನನ್ನು ಆರೋಪಿಯನ್ನಾಗಿಸಿ ಎಸ್‌ಐಟಿ ಬಂಧಿಸಿರುವುದು, ಆತನನ್ನು ಶಿವಮೊಗ್ಗ ಕಾರಾಗೃಹದಲ್ಲಿ ಇರಿಸಿರುವುದು, ಆತನಿಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ ಗೌಡ ಮತ್ತು ಸುಜಾತ ಭಟ್ ಸಹಕಾರ ನೀಡಿರುವುದು, ಕೆಲವು ಯೂ ಟ್ಯೂಬರ್‌ಗಳ ಶಾಮೀಲಾತಿ, ಮಹಜರು ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರಮ ಬಂದೂಕು, ಶಸ್ತ್ರಾಸ್ತ್ರ ಪತ್ತೆಯಾಗಿರುವುದು ಇತ್ಯಾದಿ ವಿಚಾರಗಳನ್ನೂ ವರದಿಯಲ್ಲಿ ವಿವರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ತನಿಖೆಗೆ ಸಹಕಾರ ನೀಡುತ್ತಿಲ್ಲ: ಜೀವಾವಧಿ ಶಿಕ್ಷೆಗೆ ಅರ್ಹವಾಗುವ ಅಪರಾಧ ಎಸಗಿರುವ ಚಿನ್ನಯ್ಯನಿಗೆ ಆಶ್ರಯ ನೀಡಿರುವುದು, ಆತನ ಸಂಚಾರಕ್ಕೆ ಅನುವು ಮಾಡಿರುವುದು, ಆತನೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ಶಾಮೀಲಾಗಿರುವುದು, ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಹೊರಿಸಿ ಪವಿತ್ರ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಿರುವುದು ಮುಂತಾದ ವಿಚಾರಗಳಿಗೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ ಗೌಡ ಮತ್ತು ಸುಜಾತ ಭಟ್ ವಿರುದ್ಧ ಎಸ್‌ಐಟಿ ಅಧಿಕಾರಿಗಳು ಆರೋಪ ಹೊರಿಸಿದ್ದಾರೆ.
ಇವರು ಸರಿಯಾಗಿ ತನಿಖೆಗೆ ಸಹಕರಿಸುತ್ತಿಲ್ಲ. ಎರೆರಡು ಸಲ ವಿಚಾರಣೆಗೆ ಕರೆದರೂ ಹಾಜರಾಗಿಲ್ಲ. ಆದ್ದರಿಂದ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರನ್ನು ಕೋರಿದ್ದಾರೆ.
ಎರಡು ತಾಸು ವಾದ ಮಂಡಿಸಿದ ಎಪಿಪಿ ದಿವ್ಯರಾಜ್ ಹೆಗ್ಡೆ: ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿಯ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರು ನ.೨೦ರಂದು ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ ವೇಳೆ ಎಸ್‌ಐಟಿ ಪರ ವಕೀಲರಾಗಿರುವ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಅವರು ಸುಮಾರು 2 ತಾಸು ವಾದ ಮಂಡಿಸಿದ್ದಾರೆ. ವರದಿಯ ಜತೆಗೆ ಮುಂದಿನ ತನಿಖೆಯ ಕುರಿತು ಅವರು ನ್ಯಾಯಾಧೀಶರಿಂದ ಮಾರ್ಗದರ್ಶನ ಕೋರಿದ್ದಾರೆ. ಮುಂದಿನ ತನಿಖೆ ಹಾಗೂ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ತನಿಖಾ ವರದಿ ಸಿದ್ಧಪಡಿಸಲು ಅವಕಾಶ ನೀಡುವಂತೆಯೂ ದಿವ್ಯರಾಜ್ ಹೆಗ್ಡೆ ವಾದ ಮಂಡಿಸಿದ್ದಾರೆ.
ಹಾಲಿ ಬಂಧಿತನಾಗಿರುವ ಚಿನ್ನಯ್ಯನ ಜತೆಗೆ ಉಳಿದ 5 ಮಂದಿ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಯಾವ ರೀತಿಯಲ್ಲಿ ಭಾಗಿಗಳಾಗಿದ್ದಾರೆ ಎಂಬುದರ ತನಿಖೆ ಬಾಕಿ ಉಳಿದಿದೆ. ಹೀಗಾಗಿ ಅರ್ಧದಲ್ಲಿರುವ ತನಿಖೆಯನ್ನು ಮುಂದುವರಿಸಲು ನಿರ್ದೇಶನ ನೀಡಬೇಕು ಎಂದು ಇದೇ ವೇಳೆ ದಿವ್ಯರಾಜ್ ಹೆಗ್ಡೆ ಮನವಿ ಮಾಡಿದ್ದಾರೆ. ಇವರ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.
ದೂರುದಾರನೇ ಆರೋಪಿಯಾದ ವಿಶಿಷ್ಟ ಕಥೆ!ದೂರುದಾರನೇ ಆರೋಪಿಯಾಗಿ ಬಂಧಿತನಾಗಿ ಜೈಲು ಸೇರಿದ ವಿಶಿಷ್ಟ ಕಥೆ ಬುರುಡೆ ಪ್ರಕರಣದ್ದಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು ಹಲವು ಮೃತದೇಹಗಳನ್ನು ಸ್ವತಃ ಹೂತಿದ್ದೇನೆ. ಆ ಕುರಿತು ಸಂಪೂರ್ಣ ವಿವರ ಇದೆ. ಶವ ಹೂತಿಟ್ಟಿರುವ ಜಾಗಗಳನ್ನು ಗುರುತಿಸುತ್ತೇನೆ. ಧರ್ಮಸ್ಥಳದ ಕಾಡಿನಲ್ಲಿ ಮಾನವ ತಲೆಬುರುಡೆ ಸಿಕ್ಕಿದೆ ಎಂದು ಮುಸುಕುಧಾರಿಯಾಗಿ ಬಂದಿದ್ದ ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು. ೪ರಂದು ಅಪರಾಧ ಕ್ರಮಾಂಕ:39/2025೫ರಂತೆ ಬಿಎನ್‌ಎಸ್ ಕಲಂ 211(ಎ) ಅಡಿಯಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಜು.೧೧ರಂದು ನ್ಯಾಯಾಧೀಶರ ಎದುರು ಹಾಜರಾಗಿ ನೀಡಿದ ಹೇಳಿಕೆಯ ಕುರಿತು ಜು.೨೦ರಂದು ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ 120 ದಿನಗಳ ತನಿಖೆ ನಡೆಸಿ ಇದೀಗ ನ್ಯಾಯಾಲಯಕ್ಕೆ ವರದಿ ನೀಡಿದೆ. ಎಸ್‌ಐಟಿ ಅಧಿಕಾರಿಗಳು ದೂರುದಾರನ ವಿಚಾರಣೆ ಆರಂಭಿಸಿದಾಗ ಹಲವಾರು ಸಂಶಯಗಳು ತನಿಖಾಧಿಕಾರಿಗಳಿಗೆ ಬಂದಿದ್ದವು.
ಆದರೂ ದೂರುದಾರನ ಹೇಳಿಕೆಯನ್ನು ಆಧರಿಸಿ ಜು. 27ರಂದು ಧರ್ಮಸ್ಥಳದಲ್ಲಿ ಒಟ್ಟು ೧೩ ಸ್ಥಳಗಳನ್ನು ಗುರುತಿಸಿ ಜು. 28ರಂದು ಅಗೆತದ ಮೂಲಕ ಶೋಧ ಕಾರ್ಯ ಆರಂಭಿಸಿದ್ದರು. ಜು. ೩೧ರಂದು ೬ನೇ ಸ್ಥಳದಲ್ಲಿ ಕೆಲವು ಮೂಳೆಗಳು ಪತ್ತೆಯಾಗಿದ್ದವು. ಉಳಿದಂತೆ ಇತರೆಡೆ ಹೇಳಿಕೊಳ್ಳುವಂತಹ ವಸ್ತುಗಳು ಪತ್ತೆಯಾಗಿರಲಿಲ್ಲ. ಆ. 5ರಂದು ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಯುಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದಿತ್ತು. ಆ. 12ರಂದು ಜಿಪಿಆರ್‌ಡೋನ್ ಬಳಸಿ 13ನೇ ಸ್ಥಳದ ಸುತ್ತಮುತ್ತ ಶೋಧ ಕಾರ್ಯ ನಡೆಸಲಾಗಿತ್ತು. ಅಲ್ಲಿಯೂ ಏನೂ ಸಿಗದೆ ಇದ್ದಾಗ ಸಂಶಯದ ಬೆಟ್ಟ ದೊಡ್ಡದಾಯಿತು. ಈ ಹಂತದಲ್ಲಿ ಚಿನ್ನಯ್ಯನನ್ನು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಮತ್ತೊಂದು ತಿರುವಿಗೆ ಸಾಗಿತು. ಅದುವರೆಗೆ ಬುರುಡೆ ಗ್ಯಾಂಗ್‌ನ ತಾಳಕ್ಕೆ ಕುಣಿಯುತ್ತಿದ್ದ ಚಿನ್ನಯ್ಯ ಒಂದೊಂದೇ ವಿಷಯ ಬಾಯಿಬಿಟ್ಟು ತಾನು ನಿರಪರಾಧಿ, ಸೂತ್ರಧಾರಿಗಳು ಹೇಳಿದಂತೆ ಕುಣಿಯುವ ಗೊಂಬೆಯಷ್ಟೇ ಎಂದು ಹೇಳಿಕೆ ನೀಡುವ ಮೂಲಕ ದೂರುದಾರನ ಸ್ಥಾನದಿಂದ ಆರೋಪಿಯ ಸ್ಥಾನಕ್ಕೆ ಜಾರಿದ. ಅಲ್ಲಿಂದ ಇಡೀ ಷಡ್ಯಂತ್ರದ ಒಂದೊಂದೇ ಅಂಶಗಳು ಬಯಲಾಗತೊಡಗಿದವು. ಈ ಎಲ್ಲಾ ವಿಚಾರಗಳು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿದೆ.
ಹಳ್ಳಿಯಿಂದ ದಿಲ್ಲಿಯವರೆಗೆ ಸಾಗಿದ ಬುರುಡೆ! ಇಡೀ ಪ್ರಕರಣದ ಕೇಂದ್ರ ಬಿಂದುವಾಗಿರುವ `ಬುರುಡೆ’ ಹಳ್ಳಿಯಿಂದ ದಿಲ್ಲಿಯವರೆಗೆ ಹೇಗೆ ಸಾಗಿತ್ತು ಎಂಬುದನ್ನೂ ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬುರುಡೆಯನ್ನು ಧರ್ಮಸ್ಥಳ ಗ್ರಾಮದ ಕಾಡಿನಿಂದ ತಂದಿರುವುದಾಗಿ ಆರಂಭದಲ್ಲಿ ಚಿನ್ನಯ್ಯ ಹೇಳಿದ್ದ ಅಂಶ ಮತ್ತು ಅನಂತರದಲ್ಲಿ ಅದು ಲ್ಯಾಬ್‌ನಿಂದ ಖರೀದಿಸಿದ್ದು ಎಂಬುದು ಬುರುಡೆ ಸಾಗಿದ ರೀತಿ ಮತ್ತು ಅದರ ಹಿಂದೆ ಮುಂದೆ ಇರುವವರ ಜಾತಕಗಳನ್ನೆಲ್ಲ ಎಸ್‌ಐಟಿ ಜಾಲಾಡಿದೆ. ವಿಚಾರಣೆಯ ವೇಳೆ ಬುರುಡೆ ಎಲ್ಲಿಯದ್ದು ಎಂಬ ಮಾಹಿತಿಯೇ ತನಗಿಲ್ಲ ಸೂತ್ರಧಾರಿಗಳು ತಂದುಕೊಟ್ಟದ್ದನ್ನು ತಾನು ಕೊಟ್ಟಿರುವುದಷ್ಟೇ ಎಂದು ತಿಳಿಸಿದ್ದ. ಅನಂತರ ಜಯಂತ್ ಟಿ. ಮತ್ತು ಗಿರೀಶ್ ಮಟ್ಟಣ್ಣನವರ್ ಹೆಸರು ಕೂಡ ಕೇಳಿಬಂದಿದ್ದು ಅವರನ್ನೂ ವಿಚಾರಣೆ ನಡೆಸಲಾಗಿದೆ. ಬುರುಡೆ ಹಿಡಿದುಕೊಂಡು ತಂಡ ಹೊಸದಿಲ್ಲಿಗೆ ತೆರಳಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿರುವ ಅಂಶಗಳೆಲ್ಲ ವರದಿಯಲ್ಲಿವೆ ಎಂದು ತಿಳಿದುಬಂದಿದೆ. ಬುರುಡೆಯ ಪೂರ್ವಾಪರ ತಿಳಿಯಲು ಎಸ್‌ಐಟಿಯು ಲ್ಯಾಬ್‌ಗೆ ಕಳುಹಿಸಿದ್ದು, ಅದರ ಎಫ್‌ಎಸ್‌ಎಲ್ ವರದಿ ಕೂಡ ಕೈ ಸೇರಿದೆ ಎನ್ನಲಾಗಿದೆ. ಅದರಲ್ಲಿ ಹಲವಾರು ವಿಷಯಗಳು ಗೊತ್ತಾಗಿದ್ದು ಅದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಸ್‌ಐಟಿ ವರದಿ ಸಲ್ಲಿಕೆ: ಡಿ. 2ರಂದು ಆದೇಶ ಸಾಧ್ಯತೆ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯು ಸಲ್ಲಿಕೆ ಮಾಡಿರುವ ವರದಿಗೆ ಸಂಬಂಧಿಸಿದಂತೆ ಮುಂದಿನ ತನಿಖೆಯ ಕುರಿತು ಡಿ. 2ರಂದು ಬೆಳ್ತಂಗಡಿ ನ್ಯಾಯಾಧೀಶರು ಆದೇಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನ. 20ರಂದು ಎಸ್‌ಐಟಿಯು ನ್ಯಾಯಾಲಯಕ್ಕೆ ಮಧ್ಯಾಂತರ ವರದಿ ಸಲ್ಲಿಸಿ ಚಿನ್ನಯ್ಯ ಸಹಿತ6 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖಿಸಿ ವರದಿ ನೀಡಿದ್ದು, ಸುಮಾರು 120 ದಿನಗಳ ತನಿಖೆಯ ವಿವರವನ್ನು ತಿಳಿಸಿರುವ ಜತೆಗೆ ತನಿಖೆಗೆ ಅಸಹಕಾರ ತೋರಿದವರ ಹೆಸರನ್ನೂ ದಾಖಲಿಸಿ ಮುಂದಿನ ತನಿಖೆಗೆ ಮಾರ್ಗದರ್ಶನ ನೀಡುವಂತೆ ನ್ಯಾಯಾಲಯದಲ್ಲಿ ಎಸ್‌ಐಟಿ ಪರ ವಕೀಲರು ವಾದ ಮಂಡಿಸಿದ್ದರು.
ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಎಚ್.ಟಿ. ಅವರು ವರದಿ ಸ್ವೀಕರಿಸಿದ್ದು, ವಕೀಲರ ವಾದವನ್ನು ಆಲಿಸಿದ್ದಾರೆ. ಎಸ್‌ಐಟಿ ಮೂಲಗಳ ಪ್ರಕಾರ ಡಿ. 2ರಂದು ನ್ಯಾಯಾಧೀಶರು ಸೂಕ್ತ ನಿರ್ದೇಶನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

