Site icon Suddi Belthangady

ನ. 28-29: ಉಜಿರೆಯ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ: 9 ದೇಶದ ವಿವಿಧ ಸಂಶೋಧಕರಿಂದ ಪ್ರಬಂಧ ಮಂಡನೆ-ತಂತ್ರಜ್ಞಾನಗಳಲ್ಲಿನ ಸಂಶೋಧನಾ ಸವಾಲು ಮತ್ತು ಪ್ರಗತಿಯ ಕುರಿತು ಚರ್ಚೆ

ಉಜಿರೆ: ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಗೂ ಬೆಂಗಳೂರು ವಿಭಾಗದ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ಸಹಯೋಗದಲ್ಲಿ ನ. 28 ಮತ್ತು 29ರಂದು ಎಸ್.ಡಿ.ಎಂ ಐಟಿ ಕಾಲೇಜಿನಲ್ಲಿ ಎರುಡು ದಿನಗಳ (ETCOM- 2025) ಕಂಪ್ಯೂಟಿಂಗ್ ಮತ್ತು ಸಂವಹನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮ ದಿನಾಂಕ ನ. 28 ರಂದು ಎಸ್.ಡಿ.ಎಂ ಐಟಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಲಿದ್ದು, ಉದ್ಘಾಟಕರಾಗಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ನ ಕ್ಲಸ್ಟರ್ ಮುಖ್ಯಸ್ಥ ( ಕೆಡಿಇಎಮ್) ವೆಂಕಟೇಶ್ ದೇಶ್ಪಾಂಡೆ, ಗೌರವ ಉಪಸ್ಥಿತಿಯಲ್ಲಿ ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪೂರನ್ ವರ್ಮ, ಪುಣೆಯ ಸಿದ್ದಾಂತ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಯೋಜನಾ ಅಧಿಕಾರಿ ಡಾ. ಚಾಣಕ್ಯ ಕುಮಾರ್ ಜಹ ಮತ್ತು ಐಇಇಇ ಮಂಗಳೂರು ವಿಭಾಗದ ಉಪಾಧ್ಯಕ್ಷೆ ಡಾ. ಅಶ್ವಿನಿ ಬಿ. ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ ವಹಿಸಲಿದ್ದಾರೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹಾಗು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

1680 ಸಂಶೋಧನಾ ಲೇಖನಗಳು ಸಲ್ಲಿಕೆ: ಎರಡು ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಈಗಾಗಲೇ ಅಮೇರಿಕಾ,ಚೀನಾ, ಬಾಂಗ್ಲಾದೇಶ, ಶ್ರೀಲಂಕಾ, ಇಂಡೋನೇಷ್ಯಾ ಸೇರಿದಂತೆ ವಿವಿಧ ದೇಶಗಳ ಸಂಶೋಧಕರಿಂದ ಒಟ್ಟು 1680 ಸಂಶೋಧನಾ ಲೇಖನಗಳು ಸಲ್ಲಿಕೆಯಾಗಿವೆ, ಇದರಲ್ಲಿ ಅಂತಿಮವಾಗಿ 160 ಸಂಶೋಧಕರ ಲೇಖನಗಳು ಅಂತಾರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ಮಂಡನೆಗೆ ನೋಂದಾವಣಿ ಮಾಡಿಕೊಂಡಿದೆ.

ಖ್ಯಾತ ತಜ್ಞರಿಂದ ಉಪನ್ಯಾಸ: ವಿಚಾರ ಸಂಕಿರಣದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಪ್ರಸಿದ್ಧಿಯನ್ನು ಪಡೆದಿರುವ ಸಂಶೋಧಕರಾದ ಸಾಯಿ ಕೃಷ್ಣ, ಶ್ರೀಕಾಂತ್ ರೆಡ್ಡಿ ಗುಡಿ, ವೇಂಕಟೇಶ್ ದೇಶ್ಪಾಂಡೆ ಮತ್ತು ಸತ್ಯ ಮಹೇಶ್ ವೀರ ಪನೇನಿಯವರಿಂದ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

Box- ETCOM- 2025: ಕಂಪ್ಯೂಟಿಂಗ್ ಮತ್ತು ಸಂವಹನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ತಜ್ಞರು ಮತ್ತು ವೃತ್ತಿಪರರನ್ನು ಒಟ್ಟುಗೂಡಿಸಿ ಆಧುನಿಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ತಮ್ಮ ಅನುಭವಗಳು, ನಾವೀನ್ಯತೆಗಳು ಮತ್ತು ಸಂಶೋಧನಾ ಫಲಿತಾಂಶಗಳನ್ನು ವಿನಿಮಯ, ವಿಮರ್ಶೆ ಮತ್ತು ವಿಚಾರ ಮಂಡನೆಯ ಉದ್ದೇಶವನ್ನು ಹೊಂದಿದೆ.

ಈ ವಿಚಾರ ಸಂಕಿರಣದಲ್ಲಿ ವಿದ್ಯುತ್, ಎಲೆಕ್ಟ್ರಾನಿಕ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್, ನೆಟ್‌ವರ್ಕಿಂಗ್, ಇಂಟೆಲಿಜೆನ್ಸ್ ತಂತ್ರಜ್ಞಾನಗಳು, ವೈರ್‌ಲೆಸ್, ಮೊಬೈಲ್ ಮತ್ತು ಮಲ್ಟಿಮೀಡಿಯಾ ನೆಟ್‌ವರ್ಕಿಂಗ್ ಇತರೆ ವಿಚಾರಗಳ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿನ ಸಂಶೋಧನಾ ಸವಾಲುಗಳು ಮತ್ತು ಪ್ರಗತಿಯನ್ನು ತಿಳಿಸುವುದರ ಜೊತೆಗೆ ಇವಿಷ್ಟು ವಿಚಾರಗಳ ಕುರಿತಾಗಿ ಈ ಹಿಂದೆ ಪ್ರಕಟವಾಗದ ಪ್ರಬಂಧಗಳನ್ನು ಮಂಡಿಸಲು ETCOM – 2025 ಬಹುದೊಡ್ಡ ವೇದಿಕೆಯಾಗಿದೆ.

Exit mobile version