ಬೆಳ್ತಂಗಡಿ: ಒಂದು ಉತ್ತಮ ಸಂವಿಧಾನದಿಂದ ಉತ್ತಮ ದೇಶವನ್ನು ನಿರ್ಮಿಸಬಹುದು ಎಂದು ವಾಣಿ ಪದವಿಪೂರ್ವ ಕಾಲೇಜಿನ ರಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಮೀನಾಕ್ಷಿ ಎನ್. ಹೇಳಿದರು. ಅವರು ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಗಳು ಮತ್ತು ನಾಗರಿಕರು ಭಾರತದ ಶ್ರೀಮಂತ ಪ್ರಜಾಪ್ರಭುತ್ವವನ್ನು ಗೌರವಿಸಲು, ಸಂವಿಧಾನವನ್ನು ಅಧ್ಯಯನ ಮಾಡಲು, ರಾಷ್ಟ್ರವನ್ನು ಏಕೀಕರಿಸುವ ಮೌಲ್ಯಗಳನ್ನು ಬಲಪಡಿಸಲು ಸಂವಿಧಾನ ದಿನವನ್ನು ಆಚರಿಸುವುದು ಮಹತ್ವದ ಕಾರ್ಯವಾಗಿದೆ. ಪ್ರಪಂಚದಲ್ಲೇ ಅತೀ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಸವಿಂಧಾನವನ್ನು ಕುರಿತಾದ ಜ್ಞಾನವನ್ನು ಪ್ರತಿಯೊಬ್ಬರು ಹೊಂದಬೇಕಾಗಿದೆ. ಡಾ.ಬಿ ಆರ್ ಅಂಬೇಡ್ಕರ್ ಕೇವಲ ಸಂವಿಧಾನವನ್ನು ಮಾತ್ರ ರಚಿಸಲಿಲ್ಲ. ಅದರೊಂದಿಗೆ ಭಾರತದ ಸುಂದರ ಭವಿಷ್ಯವನ್ನೇ ರಚಿಸಿದರು. ಸಂವಿಧಾನ ಕುರಿತು ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಅತ್ಯಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ದಿನೇಶ್ ಗೌಡ, ಶ್ರಾವ್ಯ ಘಟಕ ನಾಯಕರಾದ ತೀರ್ಥೇಶ್, ಸುಶ್ಮಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿದರು. ಮೌಲ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಶಾಹಿದ್ ಧನ್ಯವಾದವಿತ್ತರು.

