ಬೆಳ್ತಂಗಡಿ: ಕ್ರೀಡೆ ಶರೀರ ಮತ್ತು ಮನಸ್ಸಿಗೆ ಆರೋಗ್ಯವನ್ನು ನೀಡುವಂತಹುದು. ಉತ್ತಮ ಆರೋಗ್ಯದಲ್ಲಿ ವ್ಯಾಯಾಮದ ಮುಖ್ಯ ಪಾತ್ರವಿದೆ. ಹಾಗಾಗಿ ವಿದ್ಯಾರ್ಥಿಗಳು ಪಠ್ಯದ ಜತೆ ಕ್ರೀಡೆಯಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು ‘ ಎಂದು ಟೆಲಿಕ್ವೆನ್ಸ್ ಫ್ರೈ. ಲಿಮಿಟೆಡ್ ಇದರ ನಿರ್ದೇಶಕ ಪ್ರವೀಣ್ ಗೋರೆ ಹೇಳಿದರು.
ಅವರು ನ. 26 ರಂದು ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
‘ಇಂದಿನ ದಿನಗಳಲ್ಲಿ ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಒತ್ತು ಕೊಡಬೇಕಾದ ಅಗತ್ಯವಿದೆ. ದಿನದ ಸ್ವಲ್ಪ ಸಮಯವನ್ನು ವ್ಯಾಯಾಮಕ್ಕಾಗಿ ಮೀಸಲಿಡಬೇಕು. ಹಾಗಾಗಿ ಒಂದಲ್ಲ ಒಂದು ಕ್ರೀಡೆಯಲ್ಲಿ ಅಭಿರುಚಿ ಬೆಳೆಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಪ್ರೀತಿತಾ ಧರ್ಮವಿಜೆತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬದುಕು ಚದುರಂಗದಾಟವಿದ್ದಂತೆ. ಸೋಲು ಗೆಲುವುಗಳು ಸಾಮಾನ್ಯವಾದುದು. ಆದರೆ ಗೆಲುವಿನ ಕಡೆಗೆ ಸದಾ ಶ್ರಮವಿರಬೇಕು. ವಿದ್ಯಾರ್ಥಿಗಳು ಸೋಲಿಗೆ ಹತಾಶರಾಗದೆ ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕು’ ಎಂದರು. ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ, ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ, ಕ್ರೀಡಾ ನಿರ್ದೇಶಕ ಭರತ್ ಇದ್ದರು.
ಉಪ ಪ್ರಾಂಶುಪಾಲ ಬಿ. ಎ.ಶಮೀವುಲ್ಲಾ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಮಾಯಾ ಭಟ್ ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಕ್ರೀಡಾ ಕಾರ್ಯದರ್ಶಿ ಪಲ್ಲವಿ ಪ್ರತಿಜ್ಜಾ ವಿಧಿ ಬೋಧಿಸಿದರು. ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಭೌತಶಾಸ್ತ್ರ ಉಪನ್ಯಾಸಕಿ ಅನನ್ಯ ವಂದಿಸಿದರು.

