ಉಜಿರೆ: ಶಾಲಾ ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಹಾಗೂ ಅನುಗ್ರಹ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನ.25ರಂದು ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಅನುಗ್ರಹ ಸಭಾಂಗಣದಲ್ಲಿ ಭವ್ಯವಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಫಾ. ಅಬೆಲ್ ಲೋಬೊ ಅವರು ವಹಿಸಿಕೊಂಡಿದ್ದರು. ಸ್ಪರ್ಧೆಯ ನೋಡಲ್ ಅಧಿಕಾರಿ ಸಿದ್ದಲಿಂಗ ಸ್ವಾಮಿ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂಶೋಧನಾ ಚಟುವಟಿಕೆ ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಪ್ರೇರಣಾದಾಯಕ ಮಾತುಗಳನ್ನಾಡಿದರು.
ಅಧ್ಯಕ್ಷ, ಶಾಲಾ ಸಂಚಾಲಕ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳ ಶ್ರಮ ಮತ್ತು ಪ್ರತಿಭೆಯನ್ನು ಮೆಚ್ಚಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ, ಶಿಕ್ಷಣ ಸಂಯೋಜಕಿ ಚೇತನಾಕ್ಷಿ ಶಾಲಾ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಆಂಟನಿ ಪೆರ್ನಾಂಡಿಸ್, ಶಾಲಾ ಪ್ರಾಂಶುಪಾಲ ಫಾ. ವಿಜಯ್ ಲೋಬೊ ಹಾಗೂ ತೀರ್ಪುಗಾರರಾದ ಹರ್ಷಿತ್, ಜೆರಾಲ್ಡ್, ಶರತ್ ಕುಮಾರ್ ಮತ್ತು ರಾಜೇಶ್ವರಿ ಅವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಲಾಗಿದ್ದು, ಎಲ್ಲ ವಿಜೇತರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ವಿಜ್ಞಾನಾಧಾರಿತ ಹೊಸ ಪ್ರಯೋಗಗಳು, ಮಾದರಿಗಳು ಮತ್ತು ಸೃಜನಶೀಲ ಕೃತಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಸಹಶಿಕ್ಷಕಿ ಹೇಮಲತಾ ಸ್ವಾಗತ ಮಾಡಿ, ಸಹಶಿಕ್ಷಕ ಶ್ರೀಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕಿ ಮೇಘನಾ ವಂದನೆ ಸಲ್ಲಿಸಿದರು.

