ಹೊಸಂಗಡಿ: ಗ್ರಾಮ ಪಂಚಾಯತ್‌ನ ಸಂಜೀವಿನಿ ಯೋಜನೆಯ ಲಿಂಗತ್ವ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ (LCRP) ಸೌಮ್ಯ ನವದೆಹಲಿಯಲ್ಲಿ ನಡೆಯಲಿರುವ ಲಿಂಗತ್ವಧಾರಿತ ದೌರ್ಜನ್ಯ ವಿರೋಧಿ ‘ನವ ಚೇತನಾ 4.0’ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಣ್ ಅವರೊಂದಿಗೆ ವೇದಿಕೆಯಲ್ಲಿ ಸಂವಾದ ನಡೆಸುವ ಅವಕಾಶ ಸೌಮ್ಯ ಅವರಿಗೆ ದೊರಕಿದೆ. ಗ್ರಾಮೀಣ ಮಹಿಳಾ ಶಕ್ತೀಕರಣ, ಮಕ್ಕಳ ರಕ್ಷಣೆ ಹಾಗೂ ಲಿಂಗಸಮಾನತೆ ಕುರಿತ ಜಾಗೃತಿ ಕಾರ್ಯಕ್ರಮಗಳಲ್ಲಿ ನೀಡಿದ ಸೇವೆ ಪರಿಗಣಿಸಿ ಈ ಗೌರವ ದೊರೆತಿದೆ.

