Site icon Suddi Belthangady

ಜೆಸಿಐ ಬೆಳ್ತಂಗಡಿಯಿಂದ ಪ್ರವರ್ತಿತಗೊಂಡು ಜೆಸಿಐ ಉಜಿರೆ ಸಿಟಿ ಘಟಕದ ಮರು ಸ್ಥಾಪನೆ-ಯುವ ಉದ್ಯಮಿ ಮಹಮ್ಮದ್ ಮಿರ್ಷಾದ್ ಅಧ್ಯಕ್ಷರಾಗಿ ಪದ ಸ್ವೀಕಾರ

ಉಜಿರೆ: ಸುಮಾರು 35 ವರ್ಷ ಇತಿಹಾಸ ಹೊಂದಿದ್ದ ಜೆಸಿಐ ಉಜಿರೆ ಘಟಕವು ಜೆಸಿಐ ಬೆಳ್ತಂಗಡಿಯಿಂದ ಪ್ರವರ್ತಿತಗೊಂಡು ಜೆಸಿಐ ಉಜಿರೆ ಸಿಟಿ ಎಂಬ ನಾಮಕರಣದೊಂದಿಗೆ ಇತ್ತೀಚೆಗೆ ಉಜಿರೆಯಲ್ಲಿ ಮರುಸ್ಥಾಪನೆಯಾಯಿತು. ಉಜಿರೆಯ ಪ್ರಗತಿ ಮಹಿಳಾ ಮಂಡಲ ಸಭಾಂಗಣದಲ್ಲಿ ನಡೆದ ಸರಳ ಪದಪ್ರಧಾನ ಸಮಾರಂಭದಲ್ಲಿ ಜೆಸಿಐ ಬೆಳ್ತಂಗಡಿಯ ಘಟಕಾಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಸಭಾಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಸಿಐ ಭಾರತದ ರಾಷ್ಟೀಯ ತರಬೇತುದಾರರಾದ, ಉಜಿರೆ ಎಸ್.ಡಿ.ಎಮ್ ಪದವಿಪೂರ್ವ ವಸತಿ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಟಿ. ಕೃಷ್ಣಮೂರ್ತಿ ಜೆಸಿಐ ಉಜಿರೆ ಸಿಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ತರಬೇತಿಯೇ ಜೆಸಿ ಸಂಸ್ಥೆಯ ಜೀವಾಳ, ತರಬೇತಿಯಿಂದ ಸಾಮಾನ್ಯನು ಅಸಾಮಾನ್ಯ ನಾಗಬಲ್ಲನು ಎಂದು ಉದಾಹರಣೆಗಳೊಂದಿಗೆ ಸಭೆಯಲ್ಲಿದ್ದವರನ್ನು ಪ್ರೇರೇಪಿಸಿದರು. ಜೆಸಿಐ ಉಜಿರೆ ಸಿಟಿ ಉಜಿರೆ ಪರಿಸರದಾದ್ಯಂತ ವ್ಯಾಪಕವಾಗಿ ಹರಡಲಿ ಹೆಚ್ಚಿನ ಯುವಕರು ಈ ಸಂಸ್ಥೆ ಸೇರುವಂತಾಗಲಿ ಎಂದು ಶುಭ ಹಾರೈಸಿದರು.

ಪದ ಪ್ರಧಾನ ಅಧಿಕಾರಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಜೆಸಿಐ ವಲಯ 15ರ ಪ್ರಾಂತ್ಯ ‘ಡಿ’ ಉಪಾಧ್ಯಕ್ಷ ಉಪನ್ಯಾಸಕ ಜೆಸಿ ರಂಜಿತ್ ಹೆಚ್.ಡಿ ಹೊಸ ಜೆಸಿಗಳಿಗೆ ಪ್ರಮಾಣವಚನ ಬೋಧಿಸಿ ಅಭಿನಂದಿಸಿದರು.
ತಮ್ಮ ಜೀವನದ ಮೌಲ್ಯಗಳನ್ನು ವೃದ್ಧಿ ಸಿಕೊಳ್ಳಲು ಹಾಗೂ ವ್ಯಕ್ತಿತ್ವ ವಿಕಸನವನ್ನು ರೂಪಿಸಲು ಅಂತರಾಷ್ಟ್ರೀಯ ಸಂಸ್ಥೆಯಾದ ಜೆಸಿಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು. ಉಜಿರೆ ಜೆಸಿಯ ಹೊಸ ಹೆಸರಿನ ಅನಿವಾರ್ಯತೆಯ ಬಗ್ಗೆ ವಿವರಿಸಿದರು.

ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಮಹಮ್ಮದ್ ಮಿರ್ಷಾದ್ ಅವರಿಗೆ ಪ್ರಮಾಣವಚನ ಬೋಧಿಸಿ ಕಾಲರ್ ಮತ್ತು ಗ್ಯಾವಲ್ ಹಸ್ತಾಂತರಿಸುವ ಮೂಲಕ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರಿಸಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಹಮ್ಮದ್ ಮಿರ್ಷಾದ್ ಸಭೆಯನ್ನು ಉದ್ದೇಶಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಈ ಘಟಕದ ಶ್ರೇಯೋಭಿವೃದ್ಧಿಗಾಗಿ ಜೇಸಿ ಸದಸ್ಯರ, ಜೆಸಿಐ ಉಜಿರೆಯ ಪೂರ್ವ ಅಧ್ಯಕ್ಷರ ಹಾಗೂ ಊರವರ ಸಹಕಾರ ಕೋರಿ ಪದ ಸ್ವೀಕಾರ ಭಾಷಣ ಮಾಡಿದರು.

ನೂತನ ತಂಡದ ಕಾರ್ಯದರ್ಶಿಯಾಗಿ ಭವ್ಯಶ್ರೀ ಕೀರ್ತಿರಾಜ್, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಎನ್. ‘ಶಿವಗಿರಿ’, ರಾಜೇಶ್ ಕೆ. ‘ತ್ರಿಶೂಲ್’, ಜನಾರ್ಧನ ಕಾನರ್ಪ, ನಜೀರ್ ಚಾರ್ಮಡಿ, ಜಿತೇಶ್ ಜೈನ್, ಮೊಹಮ್ಮದ್ ಅಝರುದ್ಧಿನ್, ರಂಜನ್ ಎಸ್., ಕೋಶಾಧಿಕಾರಿಯಾಗಿ ಥಲ್ಹತ್ ಎಂ.ಜಿ., ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್, ನಿರ್ದೇಶಕರಾಗಿ ದೀಕ್ಷಿತ್ ರೈ, ಅಹ್ಮದ್ ಬಶೀರ್, ಗಿರೀಶ್, ಕಿರಣ್ ಶೆಟ್ಟಿ ಧರ್ಮಸ್ಥಳ, ಮೊಹಮ್ಮದ್ ಅರ್ಷಾದ್, ಮಹಿಳಾ ಸಂಯೋಜಕಿಯಾಗಿ ಹೇಮಾವತಿ ಕೆ. ಆಯ್ಕೆಯಾಗಿದ್ದಾರೆ.

ಜೆಸಿಐ ಉಜಿರೆ ಘಟಕದ ಪೂರ್ವ ಅಧ್ಯಕ್ಷ ಡಾ. ಕುಮಾರ್ ಹೆಗ್ಡೆ, ಶ್ರೀನಾಥ್ ಎಂ.ಪಿ. ಉಪಸ್ಥಿತರಿದ್ದು ನಮ್ಮ ಸಂಪೂರ್ಣ ಸಹಕಾರ ಈ ಘಟಕದ ಮೇಲೆ ಸದಾ ಇರುತ್ತದೆ ಎಂದು ಶುಭ ಹಾರೈಸಿದರು.

ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷ ಜೇಸಿ ಪ್ರಶಾಂತ್ ಲಾೖಲ ಹೊಸ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ನೂತನ ಅಧ್ಯಕ್ಷರನ್ನು ಜೆಸಿ ಅಬ್ದುಲ್ ಖಾದರ್ ಪರಿಚಯಿಸಿದರು. ಜೆಸಿ ಅನುದೀಪ್ ಜೈನ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಚಿತ್ರಪ್ರಭ ಜೇಸಿ ವಾಣಿ ಉದ್ಘೋಷಿಸಿದರು. ರಂಜನ್ ಗುಡಿಗಾರ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಜೆಸಿಐ ಬೆಳ್ತಂಗಡಿ ಹಾಗೂ ಜೆಸಿಐ ಉಜಿರೆ ಸಿಟಿ ಘಟಕದ ಸದಸ್ಯರು ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೆಸಿಐ ಬೆಳ್ತಂಗಡಿಯ ಕಾರ್ಯದರ್ಶಿ ಪ್ರಮೋದ್ ಕೆ. ವಂದಿಸಿದರು.

Exit mobile version