ಬೆಳ್ತಂಗಡಿ: ‘ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ. ಅರಿವು ಇದ್ದವರು ಇನ್ನೊಬ್ಬರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ನಾವು ಬದುಕುವ ಪ್ರತಿ ಹಂತದಲ್ಲೂ ಕಾನೂನಿನಡಿಯಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ಎಚ್ಚರಿಕೆಯಿಂದ ಇರಬೇಕು’ ಎಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಸಂದೇಶ್ ಕೆ. ಹೇಳಿದರು.
ಅವರು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕಾಲೇಜಿನ ಕಲಾ ಸಂಘದ ವತಿಯಿಂದ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಈ ಸಮಾಜದಲ್ಲಿ ನಾವು ತುಂಬಾ ಒಳ್ಳೆಯವರು, ತುಂಬಾ ಕೆಟ್ಟವರು ಎಂದಿಲ್ಲ. ಮನಸ್ಥಿತಿ ಮೇಲೆ ವ್ಯಕ್ತಿತ್ವ ಕಾಣುವಂತುದು. ಕೆಟ್ಟ ಚಟಗಳಿಂದ ಸದಾ ದೂರವಿರಬೇಕು. ಇವತ್ತು ಆಂಡ್ರಾಯ್ಡ್ ಮೊಬೈಲ್ ಬಳಕೆಯಿಂದ ತಿಳುವಳಿಕೆ ಉಳ್ಳವರೇ ಸಮಸ್ಯೆಯ ಮಧ್ಯೆ ಸಿಕ್ಕಿಕೊಳ್ಳುವಂತಾಗುತ್ತಿದೆ. ಹಾಗಾಗಿ ಪ್ರತಿ ಹಂತದಲ್ಲೂ ಎಚ್ಚರಿಕೆ ಇರಬೇಕು’ ಎಂದರು.
ಬೆಳ್ತಂಗಡಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ ಮಾತನಾಡಿ, ‘ಕಾನೂನು ಅರಿವು ಎಷ್ಟು ನೀಡಿದರೂ ಸಾಕಾಗದು. ಅರಿವಿಲ್ಲದೆ ಆಗುವ ಕೆಡುಕುಗಳು ಬದುಕಿಗೆ ಕೇಡಾಗಬಹುದು. ಒಂದು ಸಣ್ಣ ತಪ್ಪು ನಮ್ಮ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ’ ಎಂದ ಅವರು ದಿವಂಗತ ಕೆ. ವಸಂತ ಬಂಗೇರರು ಸ್ಥಾಪಿಸಿದ ತಾಲ್ಲೂಕಿನ ಹೆಮ್ಮೆಯ ವಿದ್ಯಾಸಂಸ್ಥೆ ಇದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವಿದ್ಯಾದಾನ ಪಡೆಯುವಂತಾಗಲಿ’ ಎಂದರು.
ವಕೀಲ ಜಿತಿನ್ ಜಿಜೋ ಪೋಕ್ಸೋ ಕಾಯಿದೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ‘ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದ ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಮನೋಭಾವ ಇರಬೇಕು. ದೌರ್ಜನ್ಯವನ್ನು ಅನುಭವಿಸಿಯೂ ಸುಮ್ಮನಿರುವುದು ಅಪರಾಧವಾಗುತ್ತದೆ. ಸಂವಿಧಾನ ನಮ್ಮ ಬದುಕಿನ ನೆಮ್ಮದಿಗೆ ಕಾನೂನಿನಡಿಯಲ್ಲಿ ಅನೇಕ ಅವಕಾಶ ನೀಡಿರುವಾಗ ನಾವು ನಮಗೆ ಬೇಕಾದನ್ನು ಪಡೆಯುವಲ್ಲಿ ಹಿಂಜರಿಯಬಾರದು’ ಎಂದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಪ್ರಶಾಂತ್ ಎಂ., ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ.ಶಮೀವುಲ್ಲಾ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಅಶ್ವಿನಿ ಪರಿಚಯಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಮಲ್ಲಿಕಾ ಹಾಗೂ ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ವಂದಿಸಿದರು.

