ಉಜಿರೆ: ಅನುಗ್ರಹ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ವತಿಯಿಂದ ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ ಜೇಮ್ಸ್ ಪಟ್ಟೇರಿಲ್ ಅವರನ್ನು ಅವರ ನಿವಾಸದಲ್ಲಿ ನ.21ರಂದು ಫಲಪುಷ್ಪ, ಹೂಗಿಡ ನೀಡುವುದರೊಂದಿಗೆ ಅಭಿನಂದಿಸಲಾಯಿತು.
ಸಂಘದ ಬಗ್ಗೆ ಪರಿಚಯ ನೀಡಿದ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಸಂಘವು 2011ರಲ್ಲಿ ಸ್ಥಾಪನೆಯಾಗಿ ಕೇವಲ 14 ವರ್ಷಗಳಲ್ಲಿ ಇಂದು ಸುಮಾರು 6000ಕ್ಕೂ ಹೆಚ್ಚು ಗ್ರಾಹಕರ ಯಶಸ್ವೀ ವ್ಯವಹಾರದ ಮೂಲಕ ರೂಪಾಯಿ 264 ಕೋಟಿಗಳಿಗೂ ಮಿಕ್ಕಿ ವ್ಯವಹಾರ ವಹಿವಾಟನ್ನು ನಡೆಸಿ ಸಾರ್ವಜನಿಕ ವಲಯದಲ್ಲಿ ದ್ರಡ ವಿಶ್ವಾಸವನ್ನು ಗಳಿಸಿದೆ ಎಂದು ತಿಳಿಸಿದರಲ್ಲದೆ ಬೆಳ್ತಂಗಡಿ ಮತ್ತು ಮೂಡಬಿದರೆ ಪ್ರದೇಶಗಳಲ್ಲಿ ಸಂಘದ ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಲಾಭದಾಯಕವಾಗಿ ಬೆಳೆಯುತ್ತಿವೆ ಎಂದು ವಿವರಿಸಿದರು.
ಯಾವುದೇ ಜಾತಿ–ಮತ ಭೇದವಿಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಎಲ್ಲಾ ವರ್ಗದ ಜನರಿಗೆ ಸಂಘವು ಹಮ್ಮಿಕೊಳ್ಳುತ್ತಿರುವ ವಿವಿಧ ಆರ್ಥಿಕ, ಸಾಮಾಜಿಕ ಸೇವಾ ಚಟುವಟಿಕೆಗಳ ಸಂಕ್ಷಿಪ್ತ ವಿವರಗಳನ್ನು ಧರ್ಮಾಧ್ಯಕ್ಷರಿಗೆ ನೀಡಿ ಸಂಘದ ಪ್ರತಿಯೊಬ್ಬ ನಿರ್ದೇಶಕರ ಪರಿಚಯವನ್ನು ಅಧ್ಯಕ್ಷರು ಮಾಡಿಕೊಟ್ಟರು. ಅಲ್ಲದೆ ನಮ್ಮ ಬಾಲ್ಯದ ದಿನಗಳಲ್ಲಿ ಸೀರೋ ಮಲಬಾರ್ ಬಂದುಗಳು ಅವರದ್ದೇ ಆದ ಚರ್ಚ್ ಗಳು ಆಗುವ ಮೊದಲು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲು ಉಜಿರೆ ಸಂತ ಅಂತೋನಿ ಚರ್ಚಿಗೆ ಬಂದು ಕೊಂಕಣಿ ಕಥೊಲಿಕ್ ಸಮುದಾಯವಾದ ನಮ್ಮೊಂದಿಗೆ ಭಾಗಿಯಾಗುತ್ತಿದ್ದುದನ್ನು ಮೆಲುಕು ಹಾಕಿದರು. ಇಂದಿಗೂ ಸಮಸ್ತ ಮಲಬಾರ್ ಬಂದುಗಳ ನಮ್ಮ ಮತ್ತು ಅನುಗ್ರಹ ಸಂಘದೊಂದಿಗಿನ ಸಂಬಂಧವು ಉತ್ತಮವಾಗಿದೆ ಎಂದರಲ್ಲದೆ ಮುಂದೆಯೂ ಇದು ಮುಂದುವರೆಯಲಿ ಎಂದು ಆಶಿಸಿದ ಅಧ್ಯಕ್ಷರು 26 ವರ್ಷಗಳ ಹಿಂದೆ ಬೆಳ್ತಂಗಡಿ ಡಯಾಸಿಸ್ ಉದ್ಘಾಟನೆ ಹಾಗೂ ನಿವೃತ್ತ ಬಿಷಪ್ ಲಾರೆನ್ಸ್ ಮುಕ್ಕುಯೀ ಅವರ ದೀಕ್ಷೆಯ ದಿನ ಮತ್ತು ನಿಮ್ಮ ದೀಕ್ಷಾದಿನ ನಾನು ಭಾಗಿಯಾಗಿರುವುದು ನನ್ನ ಭಾಗ್ಯ. ಮುಂದೆಯೂ ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದು ವಿನಂತಿಸಿದರು.
ಸಂಘದ ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜ, ನಿರ್ದೇಶಕರಾದ ಸುನಿಲ್ ಸಂತೋಷ್ ಮೊರಾಸ್, ಅರುಣ್ ಸಂದೇಶ್ ಡಿಸೋಜ, ಗೀತಾ ಫೆಲ್ಸಿಯಾನ ಡಿಸೋಜ, ಫೆಲಿಕ್ಸ್ ಡಿಸೋಜ, ಮೇಬಲ್ ಫ್ಲಾವಿಯ ಲೋಬೊ, ವಲೇರಿಯನ್ ಕ್ರಾಸ್ತಾ, ರೋಷನ್ ರೊಡ್ರಿಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್, ಪ್ರಧಾನ ಕಚೇರಿ ಶಾಖೆಯ ವ್ಯವಸ್ಥಾಪಕ ಪ್ರವೀಣ್ ಪಿಂಟೊ, ಹಾಗೂ ಸಿಬ್ಬಂದಿ ವಿನೋಲ್ ಕ್ರಾಸ್ತಾ ಉಪಸ್ಥಿತರಿದ್ದರು. ಬಿಷಪರು ಭೇಟಿಯಾದ ಎಲ್ಲರನ್ನೂ ಹರಸಿ ನಿಮ್ಮ ಮತ್ತು ನಮ್ಮ ನಡುವೆ ಇದೇ ರೀತಿಯ ಪ್ರೀತಿ ಮತ್ತು ಭಾಂದವ್ಯ ಸದಾ ಇರಲಿ ಎಂದರಲ್ಲದೆ ಅನುಗ್ರಹ ಸಂಸ್ಥೆಯು ಮುಂದೆಯೂ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

