ಬೆಳ್ತಂಗಡಿ: ಆರ್.ಸಿ.ಸಿ ಚಾರ್ಮಾಡಿ- ಕಕ್ಕಿಂಜೆ ಮತ್ತು ಆರ್.ಸಿ.ಸಿ ನೆರಿಯ ಅವರು ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರದಿಂದ ಚಾರ್ಮಾಡಿಯ ಪಂಚಾಯತ್ ನಲ್ಲಿ ಏಕ ಕಾಲದಲ್ಲಿ ಉಚಿತ ದಂತ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನ.22ರಂದು ಏರ್ಪಡಿಸಿತು.
ಉಚಿತ ಆರೋಗ್ಯ ತಪಾಸಣಾ ಶಿಬಿರ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ತೋಟತ್ತಾಡಿ, ಬೆಂದ್ರಾಳ ಧರ್ಮ ರಕ್ಷಣಾ ವೇದಿಕೆ, ಉಚಿತ ದಂತ ಚಿಕಿತ್ಸಾ ಶಿಬಿರ ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆ, ಕೆವಿಜಿ ದಂತ ಕಾಲೇಜು ಮತ್ತು ಆಸ್ಪತ್ರೆ, ಈ ಸಂಸ್ಥೆಗಳ ಸಹಕಾರದಿಂದ ನಡೆಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭು ಅವರು ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಛಾಟನೆ ನೆರವೇರಿಸಿ, ಸಾರ್ವಜನಿಕರು ಈ ಉಚಿತ ಶಿಬಿರದ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.
ಮುಂಡಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ನಾರಾಯಣ ಅವರು ನ. 23ರಂದು ಸೋಮತಡ್ಕದಲ್ಲಿ ನಡೆಯುವ ಉಚಿತ ಕಣ್ಣಿನ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆಯ ಅಧ್ಯಕ್ಷ ಡಾ. ಆಶಾ ಪಿದಮಲೆ ಅವರು ಹಲ್ಲಿನ ಆರೋಗ್ಯ ಹಾಗೂ ಅದರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹೇಳಿದರು.
ಎಸ್.ಡಿ.ಎಂ ವೈದ್ಯಕೀಯ ಸಂಘದ ವೈದ್ಯಕೀಯ ಪ್ರತಿನಿಧಿ ಡಾ ದೇವೇಂದ್ರ, ಡಾ. ರೋಹನ್ ದೀಕ್ಷಿತ್, ಡಾ.ಭವಿಷ್ಯ ಅವರು ಉಚಿತ ಆರೋಗ್ಯ ತಪಾಸಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ಕೊಟ್ಟರು. ಕೆವಿಜಿ ಕಾಲೇಜಿನ ಪೆರಿಯೋಡಾಂಟಿಕ್ಸ ವಿಭಾಗದ ಮುಖ್ಯಸ್ಥ ಡಾ.ಎಂ.ಎಂ. ದಯಾಕರ್ ಅವರು ಉಚಿತ ದಂತ ಚಿಕಿತ್ಸೆಗೆ ಸಂಬಂಧ ಪಟ್ಟ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಆರ್.ಸಿ.ಸಿ ಚಾರ್ಮಾಡಿ-ಕಕ್ಕಿಂಜೆ ಅಧ್ಯಕ್ಷೆ ಶಾರದಾ ಅವರು, ಬೆಳ್ತಂಗಡಿ ರೋಟರಿ ಕ್ಲಬ್ ನ ಅಂಗ ಸಂಸ್ಥೆ ಆರ್.ಸಿ.ಸಿ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಯಸಿದೆ. ಊರವರು ತನಗೆ ಪೂರ್ಣ ಸಹಕಾರ ನೀಡುತ್ತಾರೆ ಎಂದರು. ಧರ್ಮ ರಕ್ಷಣಾ ವೇದಿಕೆ ತೋಟತ್ತಾಡಿ, ಬೆಂದ್ರಾಳ ಅಧ್ಯಕ್ಷ ಪ್ರಸಾದ, ಕೆವಿಜಿ ದಂತ ಕಾಲೇಜಿನ ವೈದ್ಯೆ ಡಾ ಅನಿತಾ, ಪಿ.ಆರ್.ಓ ಜಯಂತ ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಸಂಚಾಲಕ ಓಬಯ್ಯ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

