Site icon Suddi Belthangady

ಮದ್ದಡ್ಕದಲ್ಲಿ‌ ಹೆದ್ದಾರಿ ಕಾಮಗಾರಿಯ ವಾಹನ ಮೈಮೇಲೆ ಹರಿದು ವೃದ್ಧ ದಾರುಣ ಸಾವು

ಬೆಳ್ತಂಗಡಿ: ಮದ್ದಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾಮಗಾರಿಯ ವಾಹನದ ಅಡಿಗೆ ಸಿಲುಕಿ ವೃದ್ದನೋರ್ವ ಮೃತಪಟ್ಟ ಘಟನೆ ನ.20ರಂದು ಸಂಭವಿಸಿದೆ. ಮೃತ ವ್ಯಕ್ತಿ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ಕೂಲಿ ಕಾರ್ಮಿಕ ಹಂಝ(72)ಎಂಬವರೆಂದು ಗುರುತಿಸಲಾಗಿದೆ. ಅವರು ಕಟ್ಟಿಗೆ ಒಡೆಯುವ ಕೂಲಿ ಕೆಲಸದ ಬಾಬ್ತು ಮದ್ದಡ್ಕಕ್ಕೆ ಹೋದವರು ಮಸೀದಿ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಕಾಮಗಾರಿಯ ವಾಹನ ಚಲಾಯಿಸುತ್ತಾ ಬಂದ ಚಾಲಕ ಬಿಹಾರಿ ರೈ ಎಂಬಾತ ವೃದ್ದನನ್ನು ಗಮನಿಸದೆ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದು ವೃದ್ದ ವಾಹನದ ಅಡಿಗೆ ಸಿಲುಕಿಕೊಂಡು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು ಅದಾಗಲೇ ಅವರು ಮೃತರಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಬಗ್ಗೆ ಮೃತರ ಅಳಿಯ ತಾಜು ಕೆ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಆರಂಭದಲ್ಲಿ ವಾರೀಸುದಾರರು ಯಾರು ಎಂದು ತಿಳಿಯದ್ದರಿಂದ ಮೃತದೇಹವನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸಮಾಜ‌ಸೇವಕರಾದ ಅಬ್ಬೋನು ಮದ್ದಡ್ಕ, ವೆನ್ಲಾಕ್ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಉದ್ಯಮಿ ಡಿ.ಡಿ ರಝಾಕ್ ಕನ್ನಡಿಕಟ್ಟೆ, ಬೆದ್ರಬೆಟ್ಟು ಮಸ್ಜಿದ್ ಅಧ್ಯಕ್ಷ ಸಲೀಮ್ ಬಿ ಮೊದಲಾದವರು ರಾತೋರಾತ್ರಿ ಮಂಗಳೂರಿಗೆ ತಲುಪಿ ಅಗತ್ಯ ಕಾನೂನು ಕ್ರಮಗಳು ತ್ವರಿತವಾಗಿ ಲಭಿಸುವಂತೆ ಮಾಡಿ ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸುವ ಪ್ರಕ್ರೀಯೆಗೆ ಸಹಾಯಿಯಾದರು.

ನ.21ರಂದು ಬೆಳಗ್ಗೆ ಬೆಳ್ತಂಗಡಿ ಮಸ್ಜಿದ್ ನಲ್ಲಿ‌ ಜಮಾಅತ್ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಶವಸ್ನಾನ ಕೈಗೊಂಡು ಮನೆಯವರಿಗೆ ಹಸ್ತಾಂತರಿಸಲಾಯಿತು. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತರು ಪತ್ನಿ ಅವ್ವಮ್ಮ, ಮಕ್ಕಳಾದ ಧರ್ಮಗುರು ಅಬ್ದುಲ್ಲ ಸ‌ಅದಿ, ಆಯಿಶಾ, ಆಮಿನಾ ಮತ್ತು ರೈಹಾನಾ ಅವರನ್ನು ಅಗಲಿದ್ದಾರೆ.

ಬಾಡಿಗೆ ಮನೆಯಲ್ಲಿ ನೆಲೆಸಿರುವ ಕುಟುಂಬ: ಮೃತ ಹಂಝ ಅವರದ್ದು ತೀರಾ ಬಡತನದ ಹಿನ್ನೆಲೆಯ ಕುಟುಂಬ. ಸ್ವಂತ ಜಾಗ ಮತ್ತು ಮನೆ ಇಲ್ಲದ್ದರಿಂದ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಏಕೈಕ ಪುತ್ರ ಧರ್ಮಗುರುಗಳಾಗಿ ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದಾರೆ‌. ಮೂವರೂ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲಾಗಿದ್ದು ಒಬ್ಬಾಕೆ ಮನೆಯಲ್ಲೇ ಇದ್ದಾರೆ. ಕುಟುಂಬದ ಆರ್ಥಿಕ ನಿರ್ವಹಣೆಗಾಗಿ ಹಂಝಾ ಅವರು ಈ‌ ಇಳಿ ವಯಸ್ಸಿನಲ್ಲೂ ಕಟ್ಟಿಗೆ ಒಡೆಯುವುದೂ ಸೇರಿದಂತೆ ಇತರ ಕೂಲಿ‌ ಕೆಲಸ‌ ಮಾಡಿ ಜೀವನ ಸಾಗಿಸುತ್ತಿದ್ದರು.

Exit mobile version