Site icon Suddi Belthangady

ಎಸ್.ಡಿ.ಎಂ. ಬಿ.ಎನ್.ಎಸ್.ವೈ.ನಿಂದ 8ನೇ ರಾಷ್ಟ್ರೀಯ ನ್ಯಾಚುರೋಪಥಿ ಶಿಬಿರ ಸಮಾರೋಪ-ದಕ್ಷಿಣ ಕನ್ನಡ ಜಿಲ್ಲೆಯ 48 ಕಡೆಗಳಲ್ಲಿ ಆಯೋಜನೆ

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪಥಿ ಮತ್ತು ವೈದ್ಯಕೀಯ ವಿಜ್ಞಾನ ಕಾಲೇಜಿನ ವತಿಯಿಂದ 8ನೇ ರಾಷ್ಟ್ರೀಯ ನ್ಯಾಚುರೋಪಥಿ ದಿನದ ಅಂಗವಾಗಿ ನ.9ರಿಂದ ನ.18ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಏಳು ತಾಲೂಕಿನಲ್ಲಿ ಹಮ್ಮಿಕೊಂಡ ಶಿಬಿರವು ಸಮಾಪನಗೊಂಡಿತು.

ಶಿಬಿರಗಳಲ್ಲಿ ನ್ಯಾಚುರೋಪಥಿ ತತ್ವಗಳು, ಯೋಗ ಚಿಕಿತ್ಸೆ, ಆಹಾರ–ಜೀವನಶೈಲಿ ಮಾರ್ಗದರ್ಶನ, ಹೈಡ್ರೋಥೆರಪಿ, ಮಣ್ಣು ಚಿಕಿತ್ಸೆ ಮತ್ತು ಒತ್ತಡ ನಿರ್ವಹಣಾ ವಿಧಾನಗಳನ್ನು ಪರಿಚಯಿಸಲಾಯಿತು. ಜತೆಗೆ ರಕ್ತದೊತ್ತಡ ಹಾಗೂ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

ಶಿಬಿರದ ಮಾರ್ಗದರ್ಶಕರಾದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪಥಿ ಮತ್ತು ವೈದ್ಯಕೀಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ ಪ್ರತಿಕ್ರಿಯಿಸಿ, ಶಿಬಿರದ ಕುರಿತು ಸಾರ್ವಜನಿಕರಿಂದ ಎಲ್ಲೆಡೆ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನ್ಯಾಚುರೋಪಥಿ ಜೀವನಶೈಲಿ, ಆಹಾರ ಪದ್ಧತಿ, ಯೋಗಾಭ್ಯಾಸಗಳು ಹಾಗೂ ಸರಳ ಆರೋಗ್ಯ ಸಂರಕ್ಷಣಾ ವಿಧಾನಗಳ ಕುರಿತು ನಡೆದ ಸಂವಾದಾತ್ಮಕ ಚರ್ಚೆಗಳು ಭಾಗವಹಿಸಿದವರಲ್ಲಿ ಹೆಚ್ಚಿನ ಆಸಕ್ತಿ ಮತ್ತು ಮೆಚ್ಚುಗೆಯನ್ನು ಗಳಿಸಿತು. ಹಲವರು ಈ ಶಿಬಿರಗಳು ತಮ್ಮ ಆರೋಗ್ಯ ಅರಿವು ಮತ್ತು ಜೀವನಶೈಲಿ ಬದಲಾವಣೆಗೆ ಪ್ರೇರಣೆ ನೀಡಿರುವುದಾಗಿ ಶಿಬಿರದಲ್ಲಿ ಭಾಗವಹಿಸಿದವರು ಅನುಭವ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ನ್ಯಾಚುರೋಪಥಿ ಆರೋಗ್ಯ ಜಾಗೃತಿ ಮತ್ತು ತಡೆಗಟ್ಟುವ ಆರೋಗ್ಯ ಸಂಸ್ಕೃತಿಯನ್ನು ಬಲಪಡಿಸಿದೆ ಎಂದು ತಿಳಿಸಿದ್ದಾರೆ.

ಕಾಲೇಜಿನ ಡೀನ್ ಡಾ.ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಈ ಶಿಬಿರಗಳು ಯಶಸ್ವಿಯಾಗಿ ನೆರವೇರಲು ಬಿ.ಎನ್.ವೈ.ಎಸ್. ವಿದ್ಯಾರ್ಥಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೋಷಕರು ಸಹಕರಿಸಿದರು. ಒಟ್ಟು 48 ಸ್ಥಳಗಳಲ್ಲಿ 2000ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಭಾಗವಹಿಸಿದರು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ಡಾ.ಅವನಿ ವೇಣುಗೋಪಾಲ್, ಡಾ.ಆಯಿಷಾ ಕನೀಸ್, ಡಾ.ವಡ್ಡೆ ವೆಂಕಟ ಕಾರ್ತಿಕ್, ಡಾ.ಭಾಷಿಣಿ, ಮತ್ತು ಡಾ.ವಿಷ್ಮಿತಾ ಶೆಟ್ಟಿ ನಡೆಸಿಕೊಟ್ಟರು.

Exit mobile version