ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್. ಐ. ಟಿ ಈಗಾಗಲೇ 3923 ಪುಟಗಳುಳ್ಳ ಆರು ಸಂಪುಟದ ವರದಿಯನ್ನು ಕೋರ್ಟ್ ಗೆ ಸಲ್ಲಿಸಿದೆ. ಕೇಸ್ ನಲ್ಲಿ ಚಿನ್ನಯ್ಯ ಸೇರಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ, ವಿಠಲ ಗೌಡ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್ ಮೇಲೆ ಷಡ್ಯಂತ್ರ ಆರೋಪವಿರುವ ವರದಿಯನ್ನು ಬೆಳ್ತಂಗಡಿ ಅಧಿಕ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ವರದಿಯ ಹಿನ್ನಲೆಯಲ್ಲಿ ನ.21ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಿತು.
ಆರೋಪಿ ಚಿನ್ನಯ್ಯಗೆ ಜಾಮೀನು ನೀಡಬೇಕೆಂದು ಕಾನೂನು ಸೇವಾ ಪ್ರಾಧಿಕಾರದ ಪ್ರತಿರಕ್ಷಣಾ ವಕೀಲರು ಬೆಳ್ತಂಗಡಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಇದಕ್ಕೆ ತಕರಾರು ತೆಗೆದ ಎಸ್ ಐ ಟಿ ಪರ ಸರ್ಕಾರಿ ವಕೀಲರಾದ ದಿವ್ಯರಾಜ್ ಹೆಗ್ಡೆ “ಈ ಪ್ರಕರಣದ ಬಗ್ಗೆ ಎಸ್ ಐ ಟಿ ತನಿಖೆ ಮಾಡಿ ಸಂಪೂರ್ಣ ಮಾಹಿತಿಯುಳ್ಳ ವರದಿ ಕೋರ್ಟ್ ಗೆ ಸಲ್ಲಿಸಿದೆ. ಇದರಲ್ಲಿ ಆರೋಪಿ ಚಿನ್ನಯ್ಯ ವಿರುದ್ಧ ಸಾಕ್ಷ್ಯಾಧಾರ ಕಂಡುಬಂದಿದ್ದು, ಆರೋಪಿಗೆ ಜಾಮೀನು ನೀಡಬಾರದು. ಹೆಚ್ಚಿನ ಲಿಖಿತ ತಕರಾರು ಮತ್ತು ವಾದ ಮಂಡಿಸಲು ಸಮಯವಕಾಶ ನೀಡಬೇಕು”ಎಂದು ಕೋರಿದರು. ಈ ಹಿನ್ನಲೆಯಲ್ಲಿ ನ್ಯಾಯಾಧೀಶರಾದ ವಿಜಯೇಂದ್ರ ಟಿ ಹೆಚ್ ರವರು ಸೋಮವಾರಕ್ಕೆ (ನ.24ಕ್ಕೆ)ಸಮಯ ನಿಗದಿಪಡಿಸಿದ್ದಾರೆ.

