ಉಜಿರೆ: ಆರೋಗ್ಯದೆಡಗಿನ ಕಾಳಜಿ ನಮ್ಮ ಮೊದಲ ಆಧ್ಯತೆಯಾಗಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯದ ಫಿಟ್ ನೆಸ್ ನಮ್ಮ ಮಾನಸಿಕ ಮತ್ತು ದೈಹಿಕ ಚೈತನ್ಯವನ್ನು ಸದಾ ಹೆಚ್ಚಿಸುತ್ತದೆ ಎಂದು ಮಡಂತ್ಯಾರ್‌ನ ಸೇಕ್ರೆಡ್ ಹಾರ್ಟ್ ಕಾಲೇಜಿನ ದೈಹಿಕ ನಿರ್ದೇಶಕ ಡಾ. ಪ್ರಕಾಶ್ ಡಿ. ಸೋಜಾ ಅಭಿಪ್ರಾಯಪಟ್ಟರು. ಅವರು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋರೋನಾದಂತ ಸಂದರ್ಭದಲ್ಲಿ ಸದೃಢ ಆರೋಗ್ಯ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಅರಿವಾಗಿದೆ. ಎಸ್.ಡಿ.ಎಂ ಸಂಸ್ಥೆ ಕ್ರೀಡೆಗೆ ಸರ್ವ ರೀತಿಯ ಸಹಕಾರ ಮತ್ತು ಪ್ರೋತ್ಸಾವನ್ನು ನೀಡುತ್ತಾ ಬಂದಿದೆ. ವಿಶಾಲವಾದ ಕ್ರೀಡಾಂಗಣ, ಈಜುಕೊಳ, ಜಿಮ್ ನಂತಹ ಅತ್ಯಾಧುನಿಕ ಸೌಲಭ್ಯಗಳು ನಿಮಗೆ ಲಭ್ಯವಿದೆ. ಇವೆಲ್ಲದರ ಬಳಕೆ ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಕನಿಷ್ಠ 30 ನಿಮಿಷ ಸಮಯವನ್ನಾದಾರು ನೀವು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಅದು ನಿಮ್ಮ ಸುಸ್ಥಿರ ಆರೋಗ್ಯವನ್ನು ಕಾಪಾಡುತ್ತದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳಿಂದ ಕ್ರೀಡಾ ಪಥಸಂಚಲನ ಮತ್ತು ಕ್ರೀಡಾ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಮೇಶ್, ಎಸ್.ಡಿ.ಎಂ ಐಟಿ ವಿಭಾಗದ ದೈಹಿಕ ಶಿಕ್ಷಣ ಉಪನ್ಯಾಸ ಪ್ರಭಾಕರ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಕ್ರೀಡಾ ಪಟುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅನರ್ಘ್ಯ ಮತ್ತು ಅಪೇಕ್ಷ ನಿರೂಪಿಸಿ, ವಿದ್ಯಾರ್ಥಿನಿ ವನಿಶ್ರೀ ವಂದಿಸಿದರು.

