Site icon Suddi Belthangady

ಬೆಳ್ತಂಗಡಿ: ತಾಲೂಕು ಮಕ್ಕಳ ಹಕ್ಕುಗಳ ಮಾಸೋತ್ಸವ 2025ರ ಉದ್ಘಾಟನೆ

ಬೆಳ್ತಂಗಡಿ: ಅನುಗ್ರಹ ಟ್ರೈನಿಂಗ್ ಕಾಲೇಜು, ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕು ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ಮತ್ತು ಮಂಗಳೂರು ಪಡಿ ಅವರ ಸಹಬಾಗಿತ್ವದಲ್ಲಿ 2025ರ ಸಾಲಿನ ಮಕ್ಕಳ ಹಕ್ಕುಗಳ ಮಸೋತ್ಸವ ಕಾರ್ಯಕ್ರಮದ ಉದ್ಘಾಟನೆ ಬೆಳ್ತಂಗಡಿ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ನ.14ರಂದು ನಡೆಯಿತು. ಮಕ್ಕಳ ಹಕ್ಕುಗಳಿಗೆ ಧ್ವನಿ ಆಗೋಣ,
ಮಕ್ಕಳ ಹಕ್ಕುಗಳನ್ನು ಗೌರವಿಸೋಣ, ಮಕ್ಕಳು ಸುರಕ್ಷಿತವಾಗಿದ್ದರೆ ಸಮಾಜ ಸುರಕ್ಷಿತವಾಗಿರುತ್ತದೆ. ಈ ಘೋಷಣೆಯನ್ನು ಬ್ಯಾನರ್ ಬಿಡಿಸುವ ಮೂಲಕ ಅನುಗ್ರಹ ಟ್ರೈನಿಂಗ್ ಕಾಲೇಜಿನ ಮ್ಯಾನೇಜಿಂಗ್ ಡೈರೆಕ್ಟರ್ ತಲ್ಹತ್ ಎಂ.ಜಿ ಅವರು ಉದ್ಘಾಟಿಸಿದರು.

ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಂಚಾಲಕ ಮಹಮ್ಮದ್ ರಫೀಕ್ ದರ್ಬೆ ಅವರು ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಬಾಲ ನ್ಯಾಯಮಂಡಳಿಯ ನಿಕಟ ಪೂರ್ವ ಸದಸ್ಯರು ಮತ್ತು ಪಡಿ ಸಂಸ್ಥೆಯ ಸಂಯೋಜಕ ಕಸ್ತೂರಿ ಬೊಳುವಾರು ಅವರು ಸಮಾಜ ಸುಭದ್ರವಾಗಿದ್ದರೆ ಅಲ್ಲಿ ಮಕ್ಕಳು ಭದ್ರವಾಗಿರುತ್ತಾರೆ. ಮಕ್ಕಳನ್ನು ಅವರ ಹಕ್ಕುಗಳಿಂದ ವಂಚಿತರಾಗದಂತೆ ರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಹದಿಹರೆಯದಲ್ಲಿ ಮಕ್ಕಳು ತಮ್ಮ ಜೀವನದ ಗುರಿಯನ್ನು ನಿರ್ಧರಿಸುವಲ್ಲಿ ಸಮಾಜವು ಮಕ್ಕಳಿಗೆ ಸಹಕಾರಿಯಾಗಬೇಕು ಎಂದು ಹೇಳಿದರು. ಮಕ್ಕಳ ರಕ್ಷಣೆಗೆ ಹಲವಾರು ಕಾನೂನುಗಳು ಇದ್ದರೂ ಕೂಡ ಮಕ್ಕಳು ಒಂದಲ್ಲ ಒಂದು ಸಮಸ್ಯೆಗಳಿಗೆ ಒಳಗಾಗುವುದನ್ನು ನೋಡುತ್ತಿದ್ದೇವೆ ಅದಕ್ಕಾಗಿ ಪ್ರತಿಯೊಬ್ಬರನ್ನು ಜಾಗೃತಗೊಳಿಸುವ ಅಗತ್ಯತೆ ಇದೆ ಎಂದು ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಜಿಲ್ಲಾ ಸಹ ಸಂಚಾಲಕ ರಮಾನಂದ ಸಾಲಿಯಾನ್ ಮುಂಡೂರು ಹೇಳಿದರು.

ಬೆಳ್ತಂಗಡಿ ತಾಲೂಕು ಮಕ್ಕಳ ಹಕ್ಕುಗಳ ಮಹೋತ್ಸವ ಸಮಿತಿಯ ಸಹ ಸಂಚಾಲಕ ಮಹಮ್ಮದ್ ನಜೀರ್ ಎಚ್. ಮಾತನಾಡಿ ಹಲವಾರು ಮಕ್ಕಳು ಸರಕಾರ ನಿಗದಿಪಡಿಸಿರುವ ವೈಯಕ್ತಿಕ ದಾಖಲೆಗಳನ್ನು ಹೊಂದಿರದ ಕಾರಣ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಂಚಿತರಾಗುತ್ತಿದ್ದಾರೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಅನುಗ್ರಹ ಟ್ರೈನಿಂಗ್ ಕಾಲೇಜು ನಿರ್ದೇಶಕರಾದ ತೌಸಿಫ್ ಕಕ್ಕಿಂಜೆ ಅವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಬೆಳ್ತಂಗಡಿ ತಾಲೂಕು ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ತಾಲೂಕು ಸಂಚಾಲಕ ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಈ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಸಂಘ-ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು. ಬೆಳ್ತಂಗಡಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಪದಾಧಿಕಾರಿಗಳಾದ ಜಲಜಾಕ್ಷಿ ಗುರುವಾಯನಕೆರೆ ಮತ್ತು ನವೀನ್ ಮೇಲಂತಬೆಟ್ಟು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನುಗ್ರಹ ಟ್ರೈನಿಂಗ್ ಕಾಲೇಜಿನ ಫೈರ್ ಅಂಡ್ ಸೇಫ್ಟಿ ವಿಭಾಗದ ಮುಖ್ಯಸ್ಥೆ ಅಂಕಿತ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಅನುಗ್ರಹ ಟ್ರೈನಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಮೀಮ ವಂದಿಸಿದರು.

Exit mobile version