Site icon Suddi Belthangady

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ ಅಧಿಕಾರಿಗಳಿಂದ  ಕೋರ್ಟ್ ಗೆ ವರದಿ ಸಲ್ಲಿಕೆ

ಬೆಳ್ತಂಗಡಿ: ಹಲವು ಸತ್ಕಾರ್ಯಗಳಿಂದ ಸುಕ್ಷೇತ್ರ ಎನಿಸಿಕೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಕೆಡಿಸಲೆಂದೇ ‘ಬುರುಡೆ ಗ್ಯಾಂಗ್‌’ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವ ಹೂತಿಟ್ಟಿರುವುದಾಗಿ ಕಥೆ ಕಟ್ಟಿಹೆಸರು ಕೆಡಿಸುವ ಷಡ್ಯಂತ್ರ ರೂಪಿಸಿತ್ತು ಎಂದು ರಾಜ್ಯ ಸರಕಾರ ಪ್ರಕರಣದ ಸತ್ಯಾಸತ್ಯ ತಿಳಿಯಲು ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್ ಐಟಿ) ತನ್ನ ವಿಚಾರಣೆಯಲ್ಲಿ ಕಂಡುಕೊಂಡಿದೆ. ಈ ಕುರಿತಾದ ಮಧ್ಯಾಂತರ ವರದಿಯನ್ನು ನ.20ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಒಟ್ಟು ಬುರುಡೆ ಪ್ರಕರಣದಲ್ಲಿ ಮಂಡ್ಯ ಮೂಲದ ಚಿನ್ನಯ್ಯ ಸಹಿತ 6 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ. ಮುಂದೆ ನ್ಯಾಯಾ ಲಯ ನೀಡುವ ನಿರ್ದೇಶನದಂತೆ ಎಸ್‌ಐಟಿಯು ಆರೋಪಿಗಳ ವಿರುದ್ಧ ಕ್ರಮ ಜರಗಿಸಲಿದೆ ಎನ್ನಲಾಗಿದೆ. ನ್ಯಾಯಾಧೀಶರು ನ. 21ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಗುರುವಾರ ಅಪರಾಹ್ನ 3ರ ಸುಮಾರಿಗೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದ ತಂಡ ಎಸ್‌ಐಟಿ ವಕೀಲರ ಜತೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಎಚ್.ಟಿ. ಅವರಿಗೆ ವರದಿ ಸಲ್ಲಿಕೆ ಮಾಡಿದೆ.

ಬುರುಡೆ ಪ್ರಕರಣದ ಷಡ್ಯಂತ್ರದಲ್ಲಿ ಆರೋಪಿ ಚಿನ್ನಯ್ಯನ ಜತೆಗೆ ಮಹೇಶ್ ಶೆಟ್ಟಿತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಸೌಜನ್ಯಾಳ ಮಾವ ವಿಠಲ್ ಗೌಡ, ಸುಜಾತಾ ಭಟ್ ಹೀಗೆ 6 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ.

ಒಟ್ಟು ಪ್ರಕರಣಕ್ಕೆ ಸಂಬಂಧಿಸಿ 3,923 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿದ್ದು, ಆರಂಭದಿಂದ ಅಂತ್ಯದವರೆಗೂ ನಡೆದ ತನಿಖಾ ಕ್ರಮಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿದೆ. ಜತೆಗೆ 5 ಮಂದಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ವಿಷಯವೂ ಒಳಗೊಂಡಿದ್ದು, 4 ಮಂದಿಯನ್ನು ಎರಡೆರಡು ಬಾರಿ ಕರೆದರೂ ಬಂದಿಲ್ಲ. ಹೀಗಾಗಿ ಮುಂದೆ ಏನು ಮಾಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡುವಂತೆ ತಿಳಿಸಲಾಗಿದೆ. ಜತೆಗೆಮುಂದಿನದಿನಗಳಲ್ಲಿಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸುಮಾರು 2 ತಾಸುಗಳ ಕಾಲ ಎಸ್ ಐಟಿ ವಕೀಲರು ನ್ಯಾಯಾಧೀಶರ ಮುಂದೆ ವರದಿಗೆ ಸಂಬಂಧಿಸಿ ವಾದಮಂಡಿಸಿದ್ದು, ವರದಿಯ ಜತೆಗೆ ಮುಂದಿನ ತನಿಖೆಯ ಕುರಿತು ಮಾರ್ಗದರ್ಶನ ಕೋರಿದ್ದಾರೆ. ಮುಂದಿನ ತನಿಖೆ ಹಾಗೂ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ತನಿಖಾ ವರದಿ ಸಿದ್ಧಪಡಿಸಲು ಅವಕಾಶ ಕೋರಿ ಎಸ್‌ಐಟಿ ವಾದ ಮಂಡಿಸಿದೆ.

ಹಾಲಿ ಬಂಧಿತನಾಗಿರುವ ಚಿನ್ನಯ್ಯನ ಜತೆಗೆ ಉಳಿದ 5 ಮಂದಿ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಯಾವ ರೀತಿಯಲ್ಲಿ ಭಾಗಿಗಳಾಗಿದ್ದಾರೆ ಎಂಬುದರ ತನಿಖೆ ಬಾಕಿ ಉಳಿದಿದ್ದು ಹೀಗಾಗಿ ಅರ್ಧದಲ್ಲಿರುವ ತನಿಖೆಯನ್ನು ಮುಂದುವರಿಸಲು ನಿರ್ದೇಶನ ಕೋರಿದೆ. ಎಸ್‌ಐಟಿ ತನಿಖಾ ವಿಚಾರವು ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಬೆಳ್ತಂಗಡಿ ಎಸ್‌ಐಟಿ ನ್ಯಾಯಾಲಯದಿಂದ ನಿರ್ದೇಶನ ಪಡೆಯುವ ಉದ್ದೇಶದಿಂದಲೂ ಈ ವರದಿ ಸಲ್ಲಿಕೆಯಾಗಿದೆ. ಎಸ್ ಐಟಿಯ ವಾದವನ್ನು ಆಲಿಸಿ ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯ ಎಸ್‌ಐಟಿಗೆ ಮುಂದಿನ ತನಿಖೆಯ ಕುರಿತು ಸೂಕ್ತ ನಿರ್ದೇಶನ ನೀಡಲಿದೆ.

ಆಶ್ರಯ ನೀಡಿ ಸಂಕಷ್ಟಕ್ಕೆ ಸಿಲುಕಿದರು: ಚಿನ್ನಯ್ಯನಿಗೆ ಆರಂಭದಿಂದಲೂ ಆಶ್ರಯ ನೀಡಿದ್ದು ಮಹೇಶ್ ಶೆಟ್ಟಿ ತಿಮರೋಡಿ ಎಂಬುದಾಗಿಯೂ ವರದಿಯಲ್ಲಿ ತಿಳಿಸಲಾಗಿದೆ. ಮಾಧ್ಯಮಗಳ ಎದುರು ಕೂಡ ತಿಮರೋಡಿ ಅವರು ಚಿನ್ನಯ್ಯ ಹಿಂದಿರುವವರು ತಾವೇ ಎಂದು ತಿಳಿಸಿದ್ದರು. ಚಿನ್ನಯ್ಯನಿಗೆ ಆಶ್ರಯ ನೀಡಿದ್ದಕ್ಕೆ ಸಂಬಂಧಿಸಿ ಎಸ್‌ಐಟಿ ತಂಡವು ತಿಮರೋಡಿ ಅವರ ಮನೆಗೆ ದಾಳಿ ನಡೆಸಿದ್ದಾಗ ದಾಖಲೆ ರಹಿತ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಇದರಿಂದ ಬಂಧನ ಭೀತಿಗೆ ಒಳಗಾಗಿ ಸ್ವಲ್ಪ ಸಮಯ ಅವರು ತಲೆಮರೆಸಿಕೊಂಡಿದ್ದರು. ಅನಂತರ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದರು. ಪ್ರಕರಣದಲ್ಲಿ ತಿಮರೋಡಿ ಅವರ ಮನೆಯವರನ್ನು ಮತ್ತು ಜಯಂತ್ ಅವರ ಮನೆಯವರನ್ನು ಕೂಡ ಎಸ್‌ಐಟಿ ತನಿಖೆಗೊಳಪಡಿಸಿತ್ತು. ಇವರೆಲ್ಲರ ವಿಚಾರಣೆಯ ಮಾಹಿತಿಯನ್ನೂ ವರದಿಯಲ್ಲಿ ಕೋರ್ಟುಗೆ ನೀಡಲಾಗಿದ್ದು, ಮುಂದಿನ ವಿಚಾರಣೆಯ ಕುರಿತಂತೆ ನಿರ್ದೇಶನ ಕೇಳಲಾಗಿದೆ.

Exit mobile version