Site icon Suddi Belthangady

ಪೆರ್ಲ-ಬೈಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ

ಬೈಪಾಡಿ: 2025 -26ರ ಶೈಕ್ಷಣಿಕ ಸಾಲಿನ ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢ ಶಾಲಾ ವಿಭಾಗ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹರೀಶ್ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್‌.ಡಿ.ಎಂ.ಸಿ ಕಾರ್ಯಾಧ್ಯಕ್ಷ ಮಹಾಬಲ ಗೌಡ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಅಂಗಡಿ ಮಜಲು, ಮುಖಂಡರಾದ ಹರೀಶ್ ಗೌಡ ಪರಪ್ಪಾಜೆ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಬಸವಲಿಂಗಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಶಿಕ್ಷಣ ಸಂಯೋಜಕ ಸಿದ್ದಲಿಂಗ ಸ್ವಾಮಿ ಆಗಮಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮೋಹನ, ಸಿಆರ್ ಪಿಗಳಾದ ರಾಜೇಶ, ಮೊಹಮ್ಮದ್ ಶರೀಫ್, ಚೇತನಾ ಉಪಸ್ಥಿತರಿದ್ದರು.

ಪ್ರತಿಭಾ ಕಾರಂಜಿ ತಾಲೂಕು ನೋಡಲ ಅಧಿಕಾರಿ ಚೇತನಾಕ್ಷಿ ಪ್ರಸ್ತಾವನೆಗೈದರು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಶಿಕ್ಷಕ ವಿಜಯ ಕುಮಾರ್ ಎಂ. ಅವರನ್ನು ಸನ್ಮಾನಿಸಲಾಯಿತು. ಸಹ ಶಿಕ್ಷಕಿ ಮೇಧ ಸನ್ಮಾನ ಪತ್ರ ವಾಚಿಸಿದರು.

ಸುಮಾರು 16 ವೈಯಕ್ತಿಕ ಹಾಗೂ 3 ಸಾಮೂಹಿಕ ವಿಭಾಗದ ಸ್ಪರ್ಧೆಗಳು ನಡೆದವು. ಶಾಲೆಯ ನಿರಂತರ ನೂರು ಶೇಕಡ ಫಲಿತಾಂಶ ಸಾಧನೆಗೆ ಶಾಲಾ ಶಿಕ್ಷಕ ವೃಂದವನ್ನು ಆರಿಕೋಡಿ ಕ್ಷೇತ್ರದ ವತಿಯಿಂದ ಧರ್ಮದರ್ಶಿಗಳು ಸನ್ಮಾನಿಸಿ ಹಾರೈಸಿದರು. ಪ್ರತಿಭಾ ಕಾರಂಜಿ ಸ್ಪರ್ಧೆಯ ವಿಜೇತರುಗಳಿಗೆ ಅರಿಕೋಡಿ ಕ್ಷೇತ್ರದ ವತಿಯಿಂದ ಬಹುಮಾನಗಳನ್ನು ಹಾಗೂ ಇಲಾಖೆಯಿಂದ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಶಾಲಾ ಎಸ್‌.ಡಿ.ಎಂ.ಸಿ., ಪೋಷಕವೃಂದ, ಹಿರಿಯ ವಿದ್ಯಾರ್ಥಿ ಸಂಘ, ಊರ ದಾನಿಗಳು, ಸಂಘ ಸಂಸ್ಥೆಗಳು ಸಹಕಾರ ನೀಡಿದರು. ಪ್ರಮುಖರಾದ ಡೀಕಯ್ಯ ಗೌಡ ಕಂಚರೊಟ್ಟು, ಹೊನ್ನಪ್ಪ ಗೌಡ ಸೋಣಕುಮೇರು, ಜಯಶ್ರೀ ಮೋಹನಗೌಡ ಕಾಡಂಡ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ. ಸ್ವಾಗತಿಸಿದರು. ಶಿಕ್ಷಕ ಮಹೇಶ್ ಬೆಳಾಲು ನಿರೂಪಿಸಿದ ಕಾರ್ಯಕ್ರಮದಲ್ಲಿ ವಿಜಯಕುಮಾರ್ ವಂದನಾರ್ಪಣೆಗೈದರು.

Exit mobile version