Site icon Suddi Belthangady

ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತನ್ವೀರ್ ಅಹಮದ್ ಉಲ್ಲಾ ಭೇಟಿ

ಉಜಿರೆ: ಅಂಕಣಕಾರರಾಗಿ, ಕವಿಯಾಗಿ, ರಾಜಕಾರಣಿಯಾಗಿ, ಉದ್ಯಮಿಯಾಗಿ, ಶಿಕ್ಷಕರಾಗಿ, ವಕೀಲರಾಗಿ ಮತ್ತು ರಾಷ್ಟ್ರೀಯ ಚಿಂತಕರಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ತನ್ವೀರ್ ಅಹಮದ್ ಉಲ್ಲಾ
ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದಲ್ಲಿ ಇಸ್ಲಾಂ ಧರ್ಮದಲ್ಲಿ ಸಮನ್ವಯತೆ ವಿಷಯದಲ್ಲಿ ಉಪನ್ಯಾಸ ನೀಡಲಿರುವ ತನ್ವೀರ್ ಅಹಮದ್ ಉಲ್ಲಾ ಅವರು ಪಾದಯಾತ್ರೆಯ ಮೂಲಕ
ಬೆಂಗಳೂರಿನಿಂದ ಆಗಮಿಸಿದ್ದರು. ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದ ನನಗೆ ದಾರಿಯುದ್ದಕ್ಕೂ ಧರ್ಮಸ್ಥಳ ವಿಶೇಷವಾಗಿ ಕಾಣಿಸಿತು.

ನೊಂದವರ ಕಣ್ಣೀರಿನಲ್ಲಿ ಆಶಾದಾಯಕವಾಗಿ, ಪ್ರೀತಿಸುವವರ ಹೃದಯದಲ್ಲಿ ಪ್ರೀತಿಯಾಗಿ, ಓದುವ ಮಕ್ಕಳ ಪುಸ್ತಕದಲ್ಲಿ, ಮರುಅರಣ್ಯೀಕರಣದ ಮರಗಳ ಗೂಡಿನಲ್ಲಿರುವ ಹಕ್ಕಿಯ ಮರಿಗಳಲ್ಲಿ ನನಗೆ ಹೆಗ್ಗಡೆ ಅವರ ಸಮಾಜ ಸೇವೆಯ ಮೂಲಕ ಧರ್ಮಸ್ಥಳ ಕಂಡಿತು. ಈ ಆಸ್ಪತ್ರೆಗೆ ಬಂದು ಇಲ್ಲಿನ ಹೈಟೆಕ್ ಸೌಲಭ್ಯವಿರುವ ಡಯಾಲಿಸಿಸ್ ಕೇಂದ್ರದಲ್ಲಿ ಸಿಗುತ್ತಿರುವ ಉಚಿತ ಡಯಾಲಿಸಿಸ್ ಸೇವೆ ನೋಡಿದಾಗ ಧರ್ಮಸ್ಥಳ ನನಗೆ ಒಂದು ಅನನ್ಯ ಕ್ಷೇತ್ರವಾಗಿ ಕಾಣಿಸಿತು. ಪೂಜ್ಯರ ಸಮಾಜ ಸೇವೆಯ ದರ್ಶನವಾಯಿತು. ಧರ್ಮಸ್ಥಳ ಎಂದರೆ ಧರ್ಮ. ಇಲ್ಲಿ ಧರ್ಮ ಪ್ರೀತಿಯಲ್ಲಿದೆ. ತ್ಯಾಗದಲ್ಲಿದೆ. ಸೇವೆಯ ರೂಪದಲ್ಲಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಯ ಸಿಬ್ಬಂದಿಗಳು ಧನ್ಯರು. ಭಾವೈಕ್ಯದ ಭಾರತ, ಪ್ರೀತಿಯ ಭಾರತ, ನಮ್ಮಲ್ಲೆರ ಭಾರತವನ್ನು ಕಟ್ಟೋಣ ಎಂದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ., ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಟೋರ್ ಇನ್- ಚಾರ್ಜ್ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.

Exit mobile version