Site icon Suddi Belthangady

ಧರ್ಮಸ್ಥಳ: ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಆಸ್ಪತ್ರೆಯಲ್ಲಿ ನ.18ರಂದು 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಡಾ। ಡಿ ವೀರೇಂದ್ರ ಹೆಗ್ಗಡೆಯವರ ಶುಭಾರ್ಶಿವಾದಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಕ್ಷೇಮ ಹಾಲ್‌ನಲ್ಲಿ ಮಧ್ಯಾಹ್ನ ಜರಗಿದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಭಿದ್ ಗಡ್ಯಾಲ್ ಅವರು ಪ್ರಸ್ತುತ ಸಮಾಜವು ಎದುರಿಸುತ್ತಿರುವ ಕಲುಷಿತ ವಾತಾವರಣವು ಮನುಷ್ಯನ ದೇಹವನ್ನು ಹೆಚ್ಚು ಫಾಸಿಗೊಳಿಸುವುದರಿಂದಾಗಿ ಪ್ರಕೃತಿ ಚಿಕಿತ್ಸೆಯು ಹೆಚ್ಚು ಫಲಕಾರಿಯಾಗುವುದಲ್ಲದೆ ಉತ್ತಮ ಜೀವನ ಶೈಲಿಗೆ ಅಗತ್ಯ ಎಂದು ತಮ್ಮ ಶುಭನುಡಿಗಳಲ್ಲಿ ತಿಳಿಸಿದರು.

ಗೌರವ ಉಪಸ್ಥಿತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ವಲಯ ಶಾಸಕ ವೇದವ್ಯಾಸ ಕಾಮತ್‌ರವರು ಶುಭಾಶಂಸನೆಗೈದು “ ಪ್ರಕೃತಿ ಚಿಕಿತ್ಸೆಯ ಮೂಲಕ ಸಾಮಾಜಿಕ ಸ್ವಾಸ್ಥ ರಕ್ಷಣೆ ಮಾಡುತ್ತಿರುವ ಡಾ। ಡಿ ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಳಕಳಿ, ಸಮಾಜಮುಖೀ ಚಿಂತನೆಗಳು ಅತ್ಯಂತ ಶ್ಲಾಘನೀಯ, ದೇಹ ಮನಸ್ಸು ಆತ್ಮಗಳನ್ನು ಪುನರ್‌ಚೇತನಗೊಳಿಸುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಂಪೂರ್ಣ ಸ್ವಾಸ್ಥಭರಿತ ಜೀವನವನ್ನು ನಾವು ಹೊಂದಬಹುದು ಎಂದು ಸಂಸ್ಥೆಯ ಕಾರ್ಯ ಚಟುವಟುಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ್ದ ಇನ್ನ ನಿಸರ್ಗಧಾಮದ ನಿರ್ದೇಶಕಿ ಡಾ॥ ಸವಿತಾ ಹರೀಶ್‌ ರವರು ಪ್ರಕೃತಿ ಚಿಕಿತ್ಸೆ ಹಾಗೂ ಪಂಚಭೂತ ತತ್ವದ ಕುರಿತು ಸಂಪೂರ್ಣ ಮಾಹಿತಿಗಳನ್ನು ನೀಡಿದರು.

2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೌಖ್ಯವನದ ಮುಖ್ಯವೈದ್ಯಾಧಿಕಾರಿ ಡಾ| ಗೋಪಾಲ ಪೂಜಾರಿಯವರು ಪ್ರಕೃತಿ ಚಿಕಿತ್ಸೆಯಲ್ಲಿ ಯೋಗವು ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ಸೌಖ್ಯವನದಲ್ಲಿ ಯಾವುದೆಲ್ಲಾ ಖಾಯಿಲೆಗಳಿಗೆ ಪ್ರಕೃತಿ ದತ್ತವಾದ ಚಿಕಿತ್ಸೆಗಳನ್ನು ನೀಡಲಾಗುವುದು ಎಂಬುದನ್ನು ವಿವರಿಸಿದರು.

ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ತಾಡಿತ್ತಾಯರವರು ಪೂಜ್ಯ ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಫಲವಾಗಿ ರೂಪುಗೊಂಡ ಶಾಂತಿವನ, ಸೌಖ್ಯವನ, ಕ್ಷೇಮವನಗಳ ಕಾರ್ಯ ಚಟುವಟಿಕೆ, ಸೌಖ್ಯವನ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿ ಪೂಜ್ಯ ಹೆಗ್ಗಡೆಯವರ ಕನಸುಗಳು ಸಾಕಾರಗೊಂಡು ಪ್ರಕೃತಿ ಚಿಕಿತ್ಸಾ ಕೇಂದ್ರಗಳ ಮೂಲಕ ಸಮಾಜ ಸೇವೆಗೈಯ್ಯುತ್ತಿರುವುದನ್ನು ಶ್ಲಾಘಿಸಿದರು.

ಸಂಸ್ಥೆಯಿಂದ ಅಪರ ಜಿಲ್ಲಾಧಿಕಾರಿ ಮತ್ತು ಮಾನ್ಯ ಶಾಸಕರನ್ನು ಗೌರವಿಸಲಾಯಿತು. ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ|| ಶೋಭಿತ್ ಶೆಟ್ಟಿಯವರು ಪ್ರಸ್ತಾವನೆಗೈದು ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಡಾ।। ಅಜಿತ್ ಮತ್ತು ಕಿರಿಯ ವೈದ್ಯರ ತಂಡದಿಂದ ಯೋಗ ಪ್ರಾತ್ಯಕ್ಷಿಕೆಯು ಪ್ರದರ್ಶನಗೊಂಡಿತು.ವ್ಯವಸ್ಥಾಪಕ ಪ್ರವೀಣ್ ಕುಮಾರ್ ರವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು. ಪಿಆರ್‌ಓ ಸುಷ್ಮಾ ಪುತ್ರನ್ ವಂದನಾರ್ಪಣೆಗೈದರು. ಸ್ವಸ್ತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Exit mobile version