ಬೆಳ್ತಂಗಡಿ: ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಇನ್ನಷ್ಟು ಹೆಚ್ಚಿಸಿ ತರಗತಿಗೆ ಒಂದರಂತೆ ಶಿಕ್ಷಕರನ್ನು ನಿಗದಿಪಡಿಸಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಪ್ರಮಾಣ ಹೆಚ್ಚಿಸಲು ಸ್ಥಳೀಯ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರು ಪ್ರಯತ್ನಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಸಂಸ್ಥೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗುವುದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭ್ಯವಾಗಬೇಕೆಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ತಿಳಿಸಿದರು.
ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪೋಷಕರ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ. ಉದ್ಘಾಟಿಸಿ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಶಾಲೆಯ ಸಾಧನೆಗಳು ಉತ್ತಮವಾಗಿದ್ದು ಪಂಚಾಯತ್ ನಿಂದ ಅಗತ್ಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಎಸ್. ಡಿ. ಎಮ್. ಸಿ ಕಾರ್ಯಾಧ್ಯಕ್ಷರಾದ ಗೋಪಾಲಗೌಡ ಅಧ್ಯಕ್ಷತೆ ವಹಿಸಿದ್ದರು.
ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ಸಮಯ ಪಾಲನೆ ಮತ್ತು ನಿರಂತರ ಪ್ರಯತ್ನದಿಂದ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಲು ಸಾಧ್ಯವೆಂದು ತಿಳಿಸಿದರು.
ಸಂಸ್ಥೆಯಿಂದ ವರ್ಗಾವಣೆಗೊಂಡ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಭಾರತೀಯ ಸೇನೆಯ ಮಾಜಿ ಯೋಧರಾದ ದಿನೇಶ ಕಲಾಯಿತೊಟ್ಟು ಮತ್ತು ವಿಕ್ರಮ ವಂಜಾರೆ ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕರ ಪಟ್ಟಿಯನ್ನು ಶಿಕ್ಷಕಿ ಶೈಲಜಾ, ಸಾಂಸ್ಕೃತಿಕ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ದಯಾನಂದ್ ಮತ್ತು ಅಭಿಷೇಕ್ ವಾಚಿಸಿದರು. ತಾಲೂಕು,ಜಿಲ್ಲಾ ಮಟ್ಟದ ಕ್ರೀಡಾ ಸಾಧಕರನ್ನು ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಡಾ. ಅನಂತ ಭಟ್,ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಸದಸ್ಯರಾದ ಸುಭಾಷಿಣಿ ಗೌಡ, ಹರೀಶ್ ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಜ್ಯೋತಿ ಸ್ವಾಗತಿಸಿ, ವೈಸ್ ಪ್ರಿನ್ಸಿಪಾಲ್ ಈಶ್ವರಿ ಕೆ. ವರದಿವಾಚನ ಮಾಡಿದರು. ಶಿಕ್ಷಕಿಯರಾದ ಆಶಾಲತಾ ಮತ್ತು ರಮ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದಿನೇಶ್ ವಂದಿಸಿದರು.

