Site icon Suddi Belthangady

8ನೇ ರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸೆ ದಿನದ ಪ್ರಯುಕ್ತ ಎಸ್.ಡಿ.ಎಂ. ನ್ಯಾಚುರೋಪತಿ ಕಾಲೇಜಿನಿಂದ ಪ್ರಾಕೃತಿಕ ಚಿಕಿತ್ಸೆ ಜಾಗೃತಿ ಮತ್ತು ಆರೋಗ್ಯ ಶಿಬಿರ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನೈಸರ್ಗಿಕ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 8ನೇ ರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸೆ ದಿನದ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಪ್ರಾಕೃತಿಕ ಚಿಕಿತ್ಸೆ ಜಾಗೃತಿ ಮತ್ತು ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ನ.16ರಂದು ಹಮ್ಮಿಕೊಂಡಿತು.

ಸವಣಾಲು ಅಂಗನವಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರಿಗೆ ನೈಸರ್ಗಿಕ ಚಿಕಿತ್ಸೆಯ ಮಹತ್ವವನ್ನು ವಿವರಿಸಿ, ಅದರ ವಿವಿಧ ವಿಧಗಳು ಹಾಗೂ ಅದರ ಪ್ರಯೋಜನಗಳ ಬಗ್ಗೆ ತಿಳಿಸಲಾಯಿತು. ಶಿಬಿರದ ಪ್ರಯುಕ್ತ ರಕ್ತದೊತ್ತಡವನ್ನು ಪರೀಕ್ಷಿಸಲಾಯಿತು.

ವೇಣೂರು ಪೊಲೀಸ್ ಠಾಣೆ: ವೇಣೂರು ಪೊಲೀಸ್ ಠಾಣೆಯಲ್ಲಿ ನ.11 ರಂದು ನೈಸರ್ಗಿಕ ಚಿಕಿತ್ಸಾ ಜಾಗೃತಿ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನೈಸರ್ಗಿಕ ಚಿಕಿತ್ಸೆ ದೇಹದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುರಿತು ತಿಳಿಸಲಾಯಿತು.

ಮನೆಯಲ್ಲಿ ಅನುಸರಿಸಬಹುದಾದ ಸರಳ ಮನೆಮದ್ದುಗಳು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ನೈಸರ್ಗಿಕ ಚಿಕಿತ್ಸೆ ವಿಧಾನಗಳು ಹೇಗೆ ಅಗತ್ಯ ಬೀಳುವುದು ಎಂಬುದರ ಕುರಿತು ಪ್ರದರ್ಶನ ಹಾಗೂ ಚರ್ಚೆ ನಡೆಯಿತು. ಜತೆಗೆ ಹೈಡ್ರೋಥೆರಪಿ, ಮಡ್ ಥೆರಪಿ, ಡಯಟ್ ಥೆರಪಿ ಮತ್ತು ಯೋಗ ಕ್ರಮಗಳು ಸೇರಿದಂತೆ ನೈಸರ್ಗಿಕ ಚಿಕಿತ್ಸೆಯ ವಿವಿಧ ಅಂಶಗಳನ್ನು ಪರಿಚಯಿಸಲಾಯಿತು. ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ಸೇರಿ ಹೆಚ್ಚಿನ ಮಂದಿ ಭಾಗವಹಿಸಿದ್ದರು.

ಉಳಿದಂತೆ ಬೆಳ್ತಂಗಡಿ ಕುತ್ಯಾರು ದೇವಸ್ಥಾನ, ಲಾಯಿಲ ಪುತ್ರಬೈಲು ಸಮಾಜಮಂದಿರದಲ್ಲಿ, ಗುರುವಾಯನಕೆರೆ ಶಕ್ತಿನಗರ, ಗೇರುಕಟ್ಟೆ, ಮುಗುಳಿ ವಸತಿ ಶಾಲೆಗಳಲ್ಲಿ ಶಿಬಿರ ನಡೆಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನೈಸರ್ಗಿಕ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಡಾ.ಭಾಷಿಣಿ ನೇತೃತ್ವದಲಿ ವೈಷ್ಣವಿ, ನಿಶಿತಾ ಮತ್ತು ಮೇಘಶ್ರೀ ಶಿಬಿರ ನಡೆಸಿಕೊಟ್ಟರು.

ಕಾಲೇಜಿನಿಂದ ನ.18 ರವರೆಗೆ ರಾಜ್ಯದ 234 ತಾಲೂಕುಗಳಲ್ಲಿ ಈ ಶಿಬಿರವನ್ನು ಆಯೋಜಿಸಿದೆ.

Exit mobile version