Site icon Suddi Belthangady

ಕಟ್ಟದಬೈಲು: ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ, ಉಪಾಧ್ಯಕ್ಷರಾಗಿ ದೀಪಾ ಎಸ್. ಮೇಚೆರಿ ಆಯ್ಕೆ

ಬೆಳ್ತಂಗಡಿ: ಓಡಿಲ್ನಾಳ ಕಟ್ಟದಬೈಲು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ ಕಲ್ಲೋಟ್ಟು ಹಾಗೂ ಉಪಾಧ್ಯಕ್ಷರಾಗಿ ದೀಪಾ ಎಸ್. ಮೇಚೆರಿ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಶಾಲೆಯ ಬಹು ಮುಖ್ಯ ಆಶೋತ್ತರಗಳ ಈಡೇರಿಕೆಗಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.

ಸರ್ಕಾರದ ಸುತ್ತೋಲೆಯಂತೆ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕ ಶಿಕ್ಷಕರ ಮಹಾಸಭೆ ನಡೆಯಿತು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿ ಶಾಂತಿ ಡಿಸೋಜ ಅವರು ನೀಡಿದರು.

ಮಕ್ಕಳ ಹಕ್ಕುಗಳ ಬಗ್ಗೆ ಪದವೀಧರ ಶಿಕ್ಷಕಿಯಾದ ಭವ್ಯ ಇವರು ಪೋಷಕರಿಗೆ ಮಾಹಿತಿ ನೀಡಿದರು. ವರ್ಗಾವಣೆಗೊಂಡ ಸಹ ಶಿಕ್ಷಕ ಪಿ. ಶಿವಾನಂದ ಭಂಡಾರಿ, ಸಹ ಶಿಕ್ಷಕಿ ಜಯಶ್ರೀ, ವಯೋ ನಿವೃತ್ತಿ ಹೊಂದಿದ ಅಡುಗೆ ಸಹಾಯಕಿ ಡೀಕಮ್ಮ ಮತ್ತು ಮಾಜಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದ ಶೇಖರ ಪೆಜತ್ತಕಾಡು ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗೌರವ ಶಿಕ್ಷಕಿಯರಾದ ಭಾಗೀರಥಿ, ಅಶ್ವಿನಿ ಮತ್ತು ಜಯಶ್ರೀ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ನಿರೂಪಣೆಯನ್ನು ಆಂಗ್ಲ ಭಾಷಾ ಪದವೀಧರ ಶಿಕ್ಷಕ ಎಮ್.ವಿ ಹಿರೇಮಠ ಅವರು ಮಾಡಿದರು.

Exit mobile version