ಕಕ್ಯಪದವು: ಎಲ್. ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯಲ್ಲಿ ಜವಾಹರಲಾಲ್ ನೆಹರೂ ರವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗಿನ ಶುಭ ಸಮಯದಲ್ಲಿ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾಸಂಸ್ಥೆಯ ಶಿಕ್ಷಕ ವೃಂದದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಮಕ್ಕಳೆಲ್ಲರಿಗೂ ಶುಭಾಶಯಗಳನ್ನು ಕೋರಿ, ವಿದ್ಯಾರ್ಥಿಗಳು ಪ್ರತಿನಿತ್ಯ ಕ್ರಿಯಾಶೀಲರಾಗಿದ್ದು, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಮಹತ್ವವನ್ನು ತಿಳಿಸಿದರು. ತದನಂತರ ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಹಾಡಿನ ಮೂಲಕ ನೆರೆದಿದ್ದ ಎಲ್ಲಾ ಮಕ್ಕಳಿಗೆ ಪ್ರೀತಿಯ ಶುಭಾಶಯಗಳನ್ನು ತಿಳಿಸಿದರು.
ಸಂಸ್ಥೆಯ ಮುಖ್ಯಶಿಕ್ಷಕಿ ವಿಜಯ ಮಕ್ಕಳನ್ನು ಉದ್ದೇಶಿಸಿ ಶಿಸ್ತು, ಪರಿಶ್ರಮ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ವಿವರಿಸಿದರು. ಶಾಲಾ ನಾಯಕಿ ದಿನಾಚರಣೆಯ ಕುರಿತಾಗಿ ಭಾಷಣದ ಮೂಲಕ ತನ್ನ ಅಭಿಪ್ರಾಯವನ್ನು ಹಂಚಿಕೊಂಡರು.
ಪ್ರಾಂಶುಪಾಲರು, ಸಂಯೋಜಕ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯಶಿಕ್ಷಕಿ ಅವರ ಜತೆಗೂಡಿ ಉಳಿದ ಎಲ್ಲ ಶಿಕ್ಷಕರು ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ಸಲ್ಲಿಸಿದರು. ಮಕ್ಕಳೆಲ್ಲರೂ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ತರಗತಿವಾರು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳೆಲ್ಲರೂ ಉತ್ಸಾಹದಿಂದ ಪಾಲ್ಗೊಂಡರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅರ್ಥ ಪೂರ್ಣವಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಸಂಪನ್ನಗೊಂಡಿತು. ಸಹ ಶಿಕ್ಷಕಿ ಪ್ರಿಯತ ಸ್ವಾಗತಿಸಿ, ಸಹಶಿಕ್ಷಕ ಪ್ರಶಾಂತ್ ಕೆ. ಕಾರ್ಯಕ್ರಮ ನಿರೂಪಿಸಿದರು. ದಿವ್ಯ ಕೆ. ವಂದಿಸಿದರು.

