Site icon Suddi Belthangady

ಆಳ್ವಾಸ್‌ನಲ್ಲಿ ದೀಪಾವಳಿಯ ಜ್ಞಾನದ ಬೆಳಕು: ಸಂಪ್ರದಾಯ, ಸಾಂಸ್ಕೃತಿಕ, ಸಿಡಿಮದ್ದಿನ ಔತಣ

ಮೂಡುಬಿದಿರೆ: ಶಿಕ್ಷಣ, ಕ್ರೀಡೆ, ಸಂಸ್ಕೃತಿ ಸಂಗಮವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನ.13ರಂದು ಬೆಳಕಿನ ಹಬ್ಬವಾದ `ಆಳ್ವಾಸ್ ದೀಪಾವಳಿ-2025’ರ ಸೊಬಗು. ಅದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯ `ಬೌದ್ಧಿಕ, ಭೌತಿಕ ಹಾಗೂ ಬಾಂಧವ್ಯ ಬೆಳೆಸುವ ಬೆಳಕು’. ಸರ್ವಧರ್ಮಗಳ ಸಮಭಾವ, ಭಾರತೀಯತೆಯ ಭ್ರಾತೃತ್ವ, ಸೌಹಾರ್ದತೆಯ ಸಮಗ್ರತೆ ಎಂಬಂತೆ ಸರ್ವ ಧರ್ಮೀಯರ ಹಾಗೂ ದೇಶದ ಐಕ್ಯತೆಯ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ `ಆಳ್ವಾಸ್ ದೀಪಾವಳಿ-2025′ ಸಂಭ್ರಮಿಸಿತು.

ನೇಸರ ಇಳಿಜಾರುವ ಮುಸ್ಸಂಜೆಯಲ್ಲಿ ಆಳ್ವಾಸ್ ಅಂಗಣದಲ್ಲಿ ಸೇರಿದ್ದ ವಿದ್ಯಾರ್ಥಿ ಸಾಗರವು ಮಿನುಗುವ ಭವಿಷ್ಯದ ತಾರೆಗಳಂತೆ ಕಣ್ಮನ ಸೆಳೆಯಿತು. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಸ್ಥಳೀಯರು ಸೇರಿ 25 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ದೀಪಾವಳಿಯು ತನು- ಮನ ಬೆಳಗಿತು.

ಮೆರವಣಿಗೆ: ಕೊಂಬು, ಕಹಳೆ, 30 ಶ್ವೇತ ಛತ್ರಿ ಚಾಮರದ ಜೊತೆ, 100ಕ್ಕೂ ಅಧಿಕ ದೇವಕನ್ಯೆಯರು, ವೇದಘೋಷ ತಂಡ, ಸುಶೋಭಿತ ಕೊಡೆ, ಪ್ರಣತಿ ಹಿಡಿದ ದೇವಕನ್ನಿಕೆಯರು, ನಾಗಸ್ವರದ ನಿನಾದ ಹಾಗೂ ಪುಟಾಣಿಗಳ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ, ಪಂಚ ಯತಿವರ್ಯರು ಹಾಗೂ ಅತಿಥಿಗಳು ಮೆರವಣಿಗೆಯಲ್ಲಿ ಸಭಾಂಗಣವನ್ನು ಪ್ರವೇಶಿಸಿದರು. ಕದನಿ (ಸಿಡಿಮದ್ದು), ಸಾಂಪ್ರದಾಯಿಕ ಮೆರವಣಿಗೆಯಿಂದ ಸಭಾಂಗಣವು ಜಾತ್ರೆಯಂತೆ ಕಂಗೊಳಿಸಿತು.

ಪರ್ಬ: ಕೃಷಿ ಪ್ರಧಾನವಾದ ಮಾತೃಮೂಲೀಯ ತುಳುನಾಡಿನ `ಪರ್ಬ’ದ (ದೀಪಾವಳಿ ಹಬ್ಬ) ಮಾದರಿಯಲ್ಲಿ ಮೊದಲಿಗೆ ಗೋ ಪೂಜೆ ನಡೆಯಿತು. ಅವಲಕ್ಕಿ, ಬೆಲ್ಲ, ಭತ್ತ, ನೀರ್ ದೋಸೆ, ಬಾಳೆ ಹಣ್ಣು ನೀಡಿ ಗೋವನ್ನು ಸತ್ಕರಿಸಲಾಯಿತು. ಆರತಿ ಬೆಳಗಿ ಆರಾಧಿಸಲಾಯಿತು. ಬಳಿಕ ಕಳಸೆ, ನೇಗಿಲು, ನೊಗ, ಮುಡಿ ಕಟ್ಟುವ ಕೊದಂಟಿ, ಕತ್ತಿ, ಹಾರೆ, ಇಸ್ಮುಳ್ಳು, ಕೊಯ್ತಿ ಸೇರಿದಂತೆ ಸಮಗ್ರ ಕೃಷಿ ಪರಿಕರಗಳು, ಹಣ್ಣು ಹಂಪಲು, ಕರಾವಳಿಯ ಗದ್ದೆಯ ನಾಟಿ ತರಕಾರಿ ಬೆಳೆಗಳು, ದವಸ ಧಾನ್ಯಗಳ ಪೂಜೆಯ ಮೂಲಕ ‘ಸಿರಿ – ಸಂಪತ್ತು -ಸಮೃದ್ಧಿಯನ್ನು ನಾಡಿಗೆ ಹರಸಲಾಯಿತು. ವೇದಿಕೆ ಮುಂಭಾಗದಲ್ಲಿ ತುಳಸಿ ಪೂಜೆ ನಡೆಯಿತು. ಕದಿರು ಕಟ್ಟಿ ಮನೆ ತುಂಬಿಸುವ ಸಮೃದ್ಧಿಯನ್ನು ಆಶಿಸಲಾಯಿತು. ನಂತರದ ದೇವಾರಾಧನೆಯಲ್ಲಿ ವಿದ್ಯಾ ಅಧಿಪತಿ ಸರಸ್ವತಿ, ಸಂಪತ್ತಿನ ದೇವಿ ಲಕ್ಷ್ಮೀ ದೇವರ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ದೀಪಾರಾಧನೆ ಮಾಡಿ ಪೂಜಿಸಲಾಯಿತು.

ಪಂಚ ಯತಿವರ್ಯ ನಮನ: ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಗುರು ರಾಮಾಂಜನೇಯ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಮೆರವಣಿಗೆ ಮೂಲಕ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಲಾಯಿತು. ಮೂರು ನೂರಕ್ಕೂ ಹೆಚ್ಚು ಲಂಗ ದಾವಣಿ ತೊಟ್ಟು ಮಲ್ಲಿಗೆ ಮುಡಿದ ಬಾಲಕಿಯರು, ಪುಟಾಣಿಗಳು ಒಟ್ಟು ವೇದಿಕೆಯ ಮೆರುಗು ಹೆಚ್ಚಿಸಿದರು.

ಜ್ಞಾನ ಸಂದೇಶ: `ಅನ್ಯರಿಗೆ ಅನ್ಯಾಯ ಆಗದಂತೆ ಬದುಕುವುದೇ ಭಾರತೀಯತೆ. ಶ್ರಮ ಬದುಕು ಸಾರ್ಥಕತೆಯ ಎಲ್ಲವೂ ದೇವರು’ ಎಂದು `ದೀಪಾವಳಿ’ ಸಂದೇಶ ನೀಡಿದ ಬಾರಕೂರು ದಾಮೋದರ ಶರ್ಮಾ ವ್ಯಾಖ್ಯಾನಿಸಿದರು. `ಜೀವನಕ್ಕೆ ದುಡ್ಡು ಮಾತ್ರ ಸಂಪತ್ತಲ್ಲ. `ವಿದ್ಯೆ, ವಿವೇಕ, ವಿನಯ’ ನಮ್ಮ ಸಂಪತ್ತು ಎಂಬ ಸಂದೇಶವನ್ನು ಆಳ್ವಾಸ್ ಸಾಕಾರಗೊಳಿಸಿದೆ’ ಎಂದು ಶ್ಲಾಘಿಸಿದರು. `ಎಷ್ಟು ದೇವರಲ್ಲ, ಯಾರು ದೇವರಲ್ಲ’ ಎಂದವರು ನಾವು. ನಮಗೆ ಪ್ರಕೃತಿ ಸೇರಿದಂತೆ ಸರ್ವಸ್ವವೂ ನಮ್ಮ ದೇವರು ಎಂದು ಭಾರತೀಯ ಭಾವುಕತೆಯನ್ನು ವರ್ಣಿಸಿದರು. `ಭಾ’ ಎಂದರೆ ಬದುಕು. `ರತಿ’ ಎಂದರೆ ಆಟ. ತಾಯಿ ಭಾರತಿ(ಭಾರತ) ಎಂದರೆ ಬದುಕಿನ ಆಟ. ಅದುವೇ ದೀಪಾವಳಿ ಎಂದರು. `ವ್ಯಯಿಸಿದಷ್ಟು ಹೆಚ್ಚಾಗುವುದು ಜ್ಞಾನ. ಆಳ್ವಾಸ್ ಆವರಣದಲ್ಲಿ ನಿರಂತರ ಜ್ಞಾನದ ದೀಪಾವಳಿ. ನಿತ್ಯ ದೀಪೋತ್ಸವ. ವಿದ್ಯಾರ್ಥಿಗಳು ಈ ಜ್ಯೋತಿಯ ಕಿರಣಗಳು’ ಎಂದರು. `ಆತ್ಮದ, ಪ್ರೀತಿಯ ಬೆಳಕು ಬೆಳಗಬೇಕು. ಅರಿಷಡ್ವರ್ಗಗಳ ಕತ್ತಲಿನಿಂದ ಹೊರಗೆ ಬರಬೇಕು’ ಎಂದು ಅವರು ಆಶಿಸಿದರು. ಮನುಷ್ಯನಾದರೆ ಭಾರತದ ನೆಲದಲ್ಲಿ ಹುಟ್ಟಬೇಕು. ಇಲ್ಲಿ ಜ್ಞಾನದ ಬೆಳಕಿದೆ. ಎಲ್ಲ ಜೀವಿಗಳಲ್ಲಿ ಆನಂದ ಕಾಣುವ ಶ್ರೇಷ್ಠ ತೆ ಇದೆ ಎಂದು ದೀಪಾವಳಿಯ ಗೋಪೂಜೆ, ನರಕಚತುರ್ದಶಿ, ಲಕ್ಷ್ಮೀ ಪೂಜೆ, ಕೃಷಿ ಪರಿಕರ ಪೂಜೆ ಸೇರಿದಂತೆ ಆಚರಣೆಗಳ ವಿಶೇಷತೆಗಳನ್ನು ವಿವರಿಸಿದರು. ದೀಪಾವಳಿ ಆಚರಣೆಗೂ ಮೊದಲು ಮಂಗಳೂರಿನ ಮೂಕಾಂಬಿಕಾ ಚೆಂಡೆ ಬಳಗದಿಂದ ಚೆಂಡೆ, ವಯೋಲಿನ್, ಕೊಳಲು ಮತ್ತು ಕೀಬೋರ್ಡ್ ಸ್ವರಗಳ ಮೂಲಕ ಮೂಡಿಬಂದ `ಸಿಂಗಾರಿ ಮೇಳ’ ಇಂಪು ನೀಡಿತು. ಕರ್ನಾಟಕದ ಮೊದಲ ಸಿಂಗಾರಿ ಮೇಳ ಎಂಬ ಖ್ಯಾತಿಗೆ ಪಾತ್ರವಾದ ಯುವ ತಂಡವು ಸಾಂಪ್ರದಾಯಿಕ ಹಾಗೂ ಕಾಂತಾರ ಮತ್ತು ಕನ್ನಡ, ತಮಿಳು, ಮಲೆಯಾಳ ಸಿನಿಮಾ ಹಾಡುಗಳಿಗೆ ನಿನಾದ ಹೊಮ್ಮಿಸಿದಾಗ ಆಗಸದಿಂದ ಸೂರ್ಯನೂ ಹೊಂಗಿರಣ ಚೆಲ್ಲಿ ಆಳ್ವಾಸ್ ಆವರಣದಲ್ಲಿ ಹೊಂಗನಸು ಮೂಡಿಸಿದ.

ಸಾಂಸ್ಕೃತಿಕ ವೈಭವ: ಆರಾಧನೆಯ ಬಳಿಕ ಆಚರಣೆಯ ಭಾಗವಾಗಿ ದೀಪಾವಳಿಯ ಸಂಭ್ರಮದ ವೇದಿಕೆಯಲ್ಲಿ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಮೇಳೈಸಿತು. ಮೊದಲಿಗೆ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ನಿರ್ದೇಶನದಲ್ಲಿ ಮೂಡಿ ಬಂದ ‘ಅಷ್ಟಲಕ್ಷ್ಮೀ’ ಭರತನಾಟ್ಯವು ಐಶ್ವರ್ಯ ಹರಸಿತು. ಶಿವ-ಪಾರ್ವತಿ ಆದರ್ಶ ದಾಂಪತ್ಯದ-ಸಾಂಗತ್ಯದ ಭಾವ ನೀಡುವ ‘ಶಂಕರಾರ್ಧ ಶರೀರಿಣಿ’ ರೂಪಕವು ಬಡಗುತಿಟ್ಟು ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಗೊಂಡಿತು. ಶಿವಪಾರ್ವತಿ ಕಲ್ಯಾಣದಲ್ಲಿ ತೆರೆಕಂಡಿತು. ಅನಂತರ ಕೃಷ್ಣ -ರಾಧೆಯರ ಮೋಹಕತೆ. ನವರಾತ್ರಿಯ ನವದುರ್ಗೆಯ ಆರಾಧನೆ ಸಂದರ್ಭದಲ್ಲಿ ಗುಜರಾತಿನಲ್ಲಿ ನರ್ತಿಸುವ ಗಾರ್ಭ ಮತ್ತು ದಾಂಡಿಯಾದ ನೃತ್ಯ. ರಾಧಾ-ಶ್ಯಾಮ ನರ್ತನವು ವಿದ್ಯಾರ್ಥಿ ಸಾಗರದ ನಡುವೆ ಪ್ರೀತಿಯ ಅಲೆ ಸೃಷ್ಟಿಸಿತು. ಜಡೆ ಕೋಲಾಟ, ಬಿಂದಿಗೆ, ತ್ರಿಶೂಲ ಆಕರ್ಷಣೆ ಹೆಚ್ಚಿಸಿದವು. ಅಚ್ಚುಕಟ್ಟಾದ ಆಂಗಿಕ ಕಸರತ್ತು ಹಾಗೂ ಲಯದಲ್ಲಿ ಮೂಡಿಬಂದ ಸಂಸ್ಥೆ ಯ ವಿದ್ಯಾರ್ಥಿಗಳ ಯೋಗ ಪ್ರದರ್ಶನ `ಯೋಗದೀಪಿಕಾ’ ಸ್ವಾಸ್ಥ್ಯ, ಪ್ರಕೃತಿ ಮಹತ್ವ ತಿಳಿಸಿತು.

ಸಾಹಸ ಕಲಾ ಮಾದರಿಯ ಮಣಿಪುರಿ ಬಿದಿರು ಕಡ್ಡಿಯಾಟದ ನರ್ತನ (ಸ್ಟಿಕ್ ಡ್ಯಾನ್ಸ್ ) ಈಶಾನ್ಯ ಭಾರತದ ಸಾಹಸ ಹಾಗೂ ಏಕಾಗ್ರತೆಯ ದರ್ಶನ ನೀಡಿತು. ಒಬ್ಬರ ಮೇಲೆ ಮತ್ತೊಬ್ಬರು ಏರಿ ನಿರ್ಮಿಸಿದ ಪಿರಮಿಡ್, ಜಿಗಿತ, ಬಾಯಿಗಿರಿಸಿದ ಚೂರಿ, ಅಗ್ನಿಯ ಆಟ ರೋಮಾಂಚನಗೊಳಿಸಿತು. ಈಶಾನ್ಯದಿಂದ ಕೇರಳದತ್ತ ವೈಭವ ತೆರಳಿತು. ವಿಷ್ಣು ದೇವರು ‘ಮೋಹಿನಿ’ ರೂಪ ತಾಳಿದಾಗ ಆಕರ್ಷಕ ಹೆಣ್ಣಿನಂತೆ ಕಣ್ಮನ ಸೆಳೆದ ಸೌಂದರ್ಯ ಹಾಗೂ ಸುಲಲಿತ ಆಂಗಿಕ ಚಲನೆಯ(ಅಟ್ಟಂ) ಕೇರಳ ಮೂಲದ ಭರತನಾಟ್ಯ `ಮೋಹಿನಿಯಾಟ್ಟಮ್’ ಪ್ರದರ್ಶಿಸಿದ ನೃತ್ಯ ಪಟುಗಳು `ಮಹಾಲಕ್ಷ್ಮೀ ಅಷ್ಟಕಮ್’ ಪ್ರಸ್ತುತ ಪಡಿಸಿದರು. ಶ್ರೀಮತಿ ಅವನಿ ಅರ್ಜುನ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಬಸವರಾಜ್ ಹಾಗೂ ಚೇತನ್ ತರಬೇತಿಯಲ್ಲಿ ಮೂಡಿ ಬಂದ ಮಲ್ಲಕಂಬ ಮತ್ತು ರೋಪ್ ಕಸರತ್ತು ಕಲಾಕ್ರೀಡೆಯಾಗಿ ಮೆರಗು ನೀಡಿತು. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ದೇಸಿ ಕಲೆ ಮನಸೂರೆಗೊಳಿಸಿತು.

ಕರ್ನಾಟಕದ ದೇಸಿ ಕಲೆಯಾದ ಡೊಳ್ಳು ಕುಣಿತವನ್ನು ಆಳ್ವಾಸ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಪ್ರೇಕ್ಷಕ ವರ್ಗವೇ ಧ್ವನಿಯಾಯಿತು. ಹುಡುಗ-ಹುಡುಗಿಯರ ಸ್ಪರ್ಧೆಯೇ ಏರ್ಪಟ್ಟು, ಕನ್ನಡ ಧ್ವಜ ಹಾರಾಡಿತು. ಪಾಶ್ಚಾತ್ಯ, ಭಾರತೀಯ, ಕಸರತ್ತುಗಳ ಮಿಶ್ರಣದಂತೆ ಸಂಕಲಿಸಿದ ಸೃಜನಾತ್ಮಕ ನೃತ್ಯ ಹೊಸ ಲೋಕಕ್ಕೆ ಕೊಂಡೊಯ್ಯಿತು. ತುಂಬಿದ ಉತ್ಸಾಹದಿಂದ ಎಡಬಿಡದೆ ಹಾಕಿದ ಹೆಜ್ಜೆ ಗಮನ ಸೆಳೆಯಿತು. ಆಶಿಂಬಂಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ `ವರ್ಷಧಾರೆ’ಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು. ಭೂಮಿಯ ರಕ್ಷಣೆಗಾಗಿ ವರಾಹ(ಹಂದಿ) ರೂಪ ತಾಳಿದ ವಿಷ್ಣು, ದಿತಿ ಮತ್ತು ಕಶ್ಯಪರ ಪುತ್ರ `ಹಿರಣ್ಯಾಕ್ಷ’ ವಧಿಸಿದ `ಹಿರಣ್ಯಾಕ್ಷ ವಧೆ’ಯನ್ನು ತೆಂಕುತಿಟ್ಟು ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತ ಪಡಿಸಲಾಯಿತು. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ತರಬೇತಿಯಲ್ಲಿ ಆದಿತ್ಯ ಅಂಬಪಾಡಿ ನಿರ್ದೇಶನದಲ್ಲಿ ಮೂಡಿಬಂತು. ಕೊನೆಯಲ್ಲಿ ವೇದಿಕೆಯಲ್ಲಿ ಗೊಂಬೆ ವಿನೋದಾವಳಿ ನೃತ್ಯ ರಂಗೇರಿದರೆ, ಆಗಸದಲ್ಲಿ ಸಿಡಿಮದ್ದು ಚಿತ್ತಾರ ಮೂಡಿಸಿತು. ಬೆಳಕಿನ ಸಂಭ್ರಮ ಮನೆ ಮಾಡಿತು.

ಶಾಸಕ ಹರೀಶ್ ಪೂಂಜ, ಉದ್ಯಮಿ ಕೆ.ಶ್ರೀಪತಿ ಭಟ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಉದ್ಯಮಿ ಮುಸ್ತಾಫ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ವಿನಯ್ ಆಳ್ವ ಮತ್ತಿತರರು ಇದ್ದರು. ಉಪನ್ಯಾಸಕ ಕೆ. ವೇಣುಗೋಪಾಲ ಶೆಟ್ಟಿ ಹಾಗೂ ಶಾಲಾ ಆಡಳಿತಾಧಿಕಾರಿ ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

Exit mobile version