Site icon Suddi Belthangady

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಶ್ರವಣ್‌ಗೆ ಸೋಲುಪ್ರಧಾನ ಕಾರ್ಯದರ್ಶಿ: ರಾಜೇಶ್, ಕಾರ್ಯಕಾರಿಣಿಗೆ ದಿವಾಕರ್, ಭುವನೇಶ್ ಆಯ್ಕೆ

ಬೆಳ್ತಂಗಡಿ: ಮುಂದಿನ ಮೂರು ವರ್ಷಗಳ ಅವಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರ ಆಯ್ಕೆಗೆ ನ.೯ರಂದು ಮಂಗಳೂರು ವಾರ್ತಾ ಇಲಾಖೆಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ಮೂವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕೆ. ರಾಜೇಶ್ ಪೂಜಾರಿ ಕಿಲ್ಲೂರು ಅವಿರೋಧವಾಗಿ ಆಯ್ಕೆಯಾಗಿದ್ದು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ದಿವಾಕರ ಪದ್ಮುಂಜ ಮತ್ತು ಭುವನೇಶ್ ಗೇರುಕಟ್ಟೆ ಚುನಾಯಿತರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ರವಣ್ ಕುಮಾರ್ ನಾಳ ಪರಾಭವಗೊಂಡಿದ್ದಾರೆ.
ಶ್ರವಣ್‌ಗೆ ಸೋಲು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಾರ್ತಾಭಾರತಿಯ ಮಂಗಳೂರು ಚೀಫ್ ಬ್ಯೂರೋ, ಕಡಬ ತಾಲೂಕಿನ ಕೊಯಿಲ ಮೂಲದ ಪುಷ್ಪರಾಜ್ ಬಿ.ಎನ್. ಚುನಾಯಿತರಾಗಿದ್ದಾರೆ. ಪುಷ್ಪರಾಜ್ ಅವರು ೧೮೭ ಮತಗಳನ್ನು ಪಡೆದುಕೊಂಡಿದ್ದು ಇವರ ಪ್ರತಿಸ್ಪರ್ಧಿಯಾಗಿದ್ದ ವಿಜಯವಾಣಿಯ ಮಂಗಳೂರು ಹಿರಿಯ ವರದಿಗಾರ ಶ್ರವಣ್ ಕುಮಾರ್ ಕೆ. ನಾಳ ೧೪೪ ಮತ ಪಡೆದು ಪರಾಭವಗೊಂಡಿದ್ದಾರೆ.

೩ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮುಹಮ್ಮದ್ ಆರೀಫ್-೧೮೦, ವಿಲ್ಫ್ರೆಡ್ ಡಿ ಸೋಜ-೧೭೭, ರಾಜೇಶ್ ಶೆಟ್ಟಿ-೧೪೭ ಮತ ಪಡೆದು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಐ.ಬಿ ಸಂದೀಪ್ ಕುಮಾರ್ ಜೈನ್-೧೩೬ ಹಾಗೂ ಗಂಗಾಧರ ಕಲ್ಲಪ್ಪಳ್ಳಿ-೧೨೬ ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ೩ ಕಾರ್ಯದರ್ಶಿ ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ ಸತೀಶ್ ಇರಾ-೨೫೬, ಸುರೇಶ್ ಡಿ.ಪಳ್ಳಿ-೨೧೮, ಎ. ಸಿದ್ದಿಕ್ ನೀರಾಜೆ-೧೬೫ ಮತ ಪಡೆದು ಜಯಗಳಿಸಿದ್ದು ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜೇಶ್ ಕುಮಾರ್ ಡಿ. ೧೩೯ ಮತ ಪಡೆದುಕೊಂಡು ಪರಾಜಿತರಾಗಿದ್ದಾರೆ. ರಾಜ್ಯ ಕಾರ್ಯಕಾರಿಣಿ ಸಮಿತಿಯ ೧ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ೨೦೪ ಮತ ಪಡೆದು ಜಯಗಳಿಸಿದ್ದು ಪ್ರತಿಸ್ಪರ್ಧಿಯಾಗಿದ್ದ ಮಹಮ್ಮದ್ ಅನ್ಸಾರ್ ಇನೋಳಿ ೧೨೪ ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿಯ ೧೫ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಂದೀಪ್ ವಾಗ್ಲೆ-೨೧೭, ದಿವಾಕರ ಪದ್ಮುಂಜ-೨೦೧, ಭುವನೇಶ್ ಗೇರುಕಟ್ಟೆ-೧೯೯, ಸಂದೇಶ್ ಜಾರ-೧೯೫, ಹರೀಶ್ ಮೋಟುಕಾನ-೧೮೬, ಜಯಶ್ರೀ-೧೮೪, ಸಂದೀಪ್ ಸಾಲ್ಯಾನ್-೧೭೧, ಲಕ್ಷ್ಮೀನಾರಾಯಣ ರಾವ್-೧೬೩, ಹರೀಶ್ ಕೆ.ಆದೂರು-೧೫೨, ಸಂದೀಪ್ ಕುಮಾರ್ ಎಂ.-೧೪೫, ಗಿರೀಶ್ ಅಡ್ಪಂಗಾಯ-೧೪೧, ಅಶೋಕ್ ಶೆಟ್ಟಿ ಬಿ.ಎನ್-೧೩೫, ಆರಿಫ್ ಕಲ್ಕಟ್ಟ-೧೩೩, ಅಭಿಷೇಕ್ ಎಚ್.ಎಸ್-೧೨೬ ಹಾಗೂ ಕಿರಣ್ ಯು ಸಿರ್ಸಿಕರ್-೧೨೨ ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರಕಾಶ್ ಸುವರ್ಣ-೧೧೭, ಶಶಿಧರ ಬಂಗೇರ-೧೧೫, ಪ್ರವೀಣ್‌ರಾಜ್ ಕೆ.ಎಸ್-೧೧೪, ಲೋಕೇಶ್ ಸುರತ್ಕಲ್-೧೧೬, ಶೇಖ್ ಜೈನುದ್ದೀನ್-೯೪ ಮತ್ತು ಮಂಜುನಾಥ ಕೆ.ಪಿ-೪೯ ಮತ ಪಡೆದು ಸೋಲೊಪ್ಪಿಕೊಂಡಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕೆ. ಪೂಜಾರಿ ಹಾಗೂ ಕೋಶಾಧಿಕಾರಿಯಾಗಿ ವಿಜಯ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಸಂಘದ ಒಟ್ಟು ೨೩ ಸ್ಥಾನಗಳಿಗೆ ೩೪ ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ೩೫೪ ಸದಸ್ಯರ ಪೈಕಿ ೩೩೧ ಮಂದಿ ಮತದಾನ ಮಾಡುವ ಮೂಲಕ ಶೇ.೯೩.೨೩ ಮತದಾನ ಆಗಿತ್ತು.

ಬೆಳ್ತಂಗಡಿಯವರಿಂದ ಅದೃಷ್ಟ ಪರೀಕ್ಷೆ: ಜಿದ್ದಾಜಿದ್ದಿನಿಂದ ಮತ್ತು ಭಾರೀ ಪ್ರತಿಷ್ಠೆಯಿಂದ ಕೂಡಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ನಾಲ್ವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳ ನಿವಾಸಿಯಾಗಿದ್ದು ವಿಜಯವಾಣಿ ಪತ್ರಿಕೆಯ ಮಂಗಳೂರು ಹಿರಿಯ ವರದಿಗಾರರಾಗಿರುವ ಶ್ರವಣ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪ್ರಥಮ ಪ್ರಯತ್ನದಲ್ಲಿ ಪ್ರಬಲ ಪೈಪೋಟಿ ನೀಡಿದರಾದರೂ ವಾರ್ತಾಭಾರತಿಯ ಮಂಗಳೂರು ಬ್ಯೂರೋ ಚೀಫ್ ಆಗಿರುವ ಕಡಬ ತಾಲೂಕಿನ ಕೊಯಿಲ ಮೂಲದವರಾಗಿರುವ ಪುಷ್ಪರಾಜ್ ಬಿ.ಎನ್. ಎದುರು ಸೋಲನುಭವಿಸಿದ್ದಾರೆ. ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಭುವನೇಶ್ ಗೇರುಕಟ್ಟೆ ಮತ್ತು ದಿವಾಕರ್ ಪದ್ಮುಂಜ ಗೆಲುವು ಸಾಧಿಸಿದ್ದಾರೆ. ಭುವನೇಶ್ ಗೇರುಕಟ್ಟೆ ಕಳೆದ ೨೬ ವರ್ಷಗಳಿಂದ ಪತ್ರಿಕಾ ರಂಗದಲ್ಲಿದ್ದಾರೆ. ೧೯೯೯ರಲ್ಲಿ ಬೆಳ್ತಂಗಡಿಯ ಜೈ ಕನ್ನಡಮ್ಮ ವಾರ ಪತ್ರಿಕೆಯಿಂದ ವೃತ್ತಿ ಆರಂಭಿಸಿದ ಇವರು ಬಳಿಕ ದಿನಪತ್ರಿಕೆಗಳಾದ ಹೊಸದಿಂಗತ, ಸಂಯುಕ್ತ ಕರ್ನಾಟಕ, ಜಯಕಿರಣ, ವಿಜಯ ಕರ್ನಾಟಕದಲ್ಲಿ ವರದಿಗಾರರಾಗಿ ದುಡಿದು ಈಗ ಪ್ರತಿನಿಧಿ ಪ್ರತಿಕೆಯಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಕೋಶಾಧಿಕಾರಿಯಾಗಿದ್ದಾರೆ. ದ.ಕ ಜಿಲ್ಲಾ ಸಂಘದಲ್ಲಿ ಕಾರ್ಯಕಾರಿಣಿ ಸದಸ್ಯ, ಎರಡು ಬಾರಿ ಕಾರ್ಯದರ್ಶಿಯಾಗಿರುವ ಇವರು ಈ ಬಾರಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನದ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ. ದಿವಾಕರ್ ಪದ್ಮುಂಜರವರು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮಲೆಂಗಲ್ಲು ನಿವಾಸಿಯಾಗಿದ್ದು ಕಳೆದ ೧೯ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಟಿವಿ ೯, ಝೀ ನ್ಯೂಸ್, ಸಮಯ, ಜನಶ್ರೀ, ಪ್ರಜಾ ಟಿವಿ, ದಿಗ್ವಿಜಯ ವಾಹಿನಿಯಲ್ಲಿ ವೀಡಿಯೋ ಜರ್ನಲಿಸ್ಟ್ ಆಗಿದ್ದ ದಿವಾಕರ್ ಈಗ ರಿಪಬ್ಲಿಕ್ ಕನ್ನಡ ವಾಹಿನಿಯ ದ.ಕ.ಜಿಲ್ಲಾ ವೀಡಿಯೋ ಜರ್ನಲಿಸ್ಟ್ ಆಗಿದ್ದಾರೆ. ೨೦೧೧ರಲ್ಲಿ ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿಗೆ ಸ್ಪರ್ಧಿಸಿ ಆಯ್ಕೆಯಾದ ದಿವಾಕರ್ ಈಗ ಎರಡನೇ ಬಾರಿಗೆ ಕಾರ್ಯಕಾರಿಣಿ ಸಮಿತಿಗೆ ಸ್ಪರ್ಧಿಸಿ ವಿಜಯಿಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ರಾಜೇಶ್ ಕೆ. ಪೂಜಾರಿ ಅವರು ಬೆಳ್ತಂಗಡಿ ತಾಲೂಕಿನ ಕಿಲ್ಲೂರಿನವರಾಗಿದ್ದು ಕಳೆದ ಹದಿನಾರು ವರ್ಷಗಳಿಂದ ವೀಡಿಯೋ ಜರ್ನಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ೧೪ ವರ್ಷಗಳಿಂದ ಟಿವಿ ೯ ಕನ್ನಡದಲ್ಲಿ ವೀಡಿಯೋ ಜರ್ನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Exit mobile version