Site icon Suddi Belthangady

ಬೆಳ್ತಂಗಡಿ ಉಪವಿಭಾಗದ ಪ್ರಥಮ ಡಿವೈಎಸ್‌ಪಿರೋಹಿಣಿ ಕರ್ತವ್ಯಕ್ಕೆ ಹಾಜರು-ಅಧಿಕಾರಿಗಳಿಂದ ಸ್ವಾಗತ

ಬೆಳ್ತಂಗಡಿ: ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳನ್ನು ಕೇಂದ್ರೀಕರಿಸಿ ಬಿ.ಸಿ.ರೋಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಡಿವೈಎಸ್ಪಿ ಕಚೇರಿ ಇಬ್ಬಾಗಗೊಂಡು ಬೆಳ್ತಂಗಡಿ ಉಪವಿಭಾಗ ಅಸ್ತಿತ್ವಕ್ಕೆ ಬಂದಿದ್ದು ಪ್ರಥಮ ಡಿವೈಎಸ್‌ಪಿಯಾಗಿ ಸಿ.ಕೆ. ರೋಹಿಣಿ ನ.೧೦ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬಂಟ್ವಾಳ ಉಪವಿಭಾಗದಿಂದ ಬೆಳ್ತಂಗಡಿಯನ್ನು ಪ್ರತ್ಯೇಕಿಸಿ ಹೊಸದಾಗಿ ಉಪವಿಭಾಗ ಕಾರ್ಯರೂಪಕ್ಕೆ ತರಲಾಗಿದ್ದು ಹೊಸದಾಗಿ ಅಸ್ತಿತ್ವಕ್ಕೆ ಬಂದ ಬೆಳ್ತಂಗಡಿ ಉಪವಿಭಾಗಕ್ಕೆ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಉಪ್ಪಿನಂಗಡಿ ಪೊಲೀಸ್ ಠಾಣೆ ಮತ್ತು ಬೆಳ್ತಂಗಡಿ ಸಂಚಾರಿ ಠಾಣೆಯ ವ್ಯಾಪ್ತಿ ಸೇರಲಿದ್ದರೆ ಬಂಟ್ವಾಳ ಉಪವಿಭಾಗಕ್ಕೆ ಇನ್ನು ಮುಂದೆ ಬಂಟ್ವಾಳ ನಗರ, ಗ್ರಾಮಾಂತರ, ಸಂಚಾರಿ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಗೆ ಸೀಮಿತವಾಗಲಿವೆ. ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿದ್ದ ಬಂಟ್ವಾಳವನ್ನು ೨೦೧೩ರಲ್ಲಿ ಪ್ರತ್ಯೇಕಿಸಿ ಬಂಟ್ವಾಳ ಉಪವಿಭಾಗ ಅಸ್ತಿತ್ವಕ್ಕೆ ತರಲಾಗಿದ್ದು ಡಿವೈಎಸ್ಪಿ ದರ್ಜೆಯ ಅಧಿಕಾರಿಯನ್ನು ನಿಯುಕ್ತಿಗೊಳಿಸಲಾಗಿತ್ತು.

ಮೊದಲ ಡಿವೈಎಸ್ಪಿಯಾಗಿ ಸದಾನಂದ ವರ್ಣೇಕರ್ ಕಾರ್ಯ ನಿರ್ವಹಿಸಿದ್ದರು. ಬಳಿಕ ಇಲ್ಲಿ ಒಂದಷ್ಟು ಸಮಯ ಎಎಸ್ಪಿ ದರ್ಜೆಯ ಇಬ್ಬರು ಅಧಿಕಾರಿಗಳು ಪ್ರೊಬೇಷನರಿಯಾಗಿ ಕಾರ್ಯ ನಿರ್ವಹಿಸಿ ಎಸ್ಪಿಯಾಗಿ ಭಡ್ತಿಗೊಂಡು ವರ್ಗಾವಣೆಗೊಂಡಿದ್ದರು. ನಂತರದ ದಿನಗಳಲ್ಲಿ ಡಿವೈಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ವಿಜಯಪ್ರಸಾದ್ ಡಿವೈಎಸ್ಪಿಯಾಗಿದ್ದಾರೆ. ನೂತನವಾಗಿ ಅಸ್ತಿತ್ವಕ್ಕೆ ಬಂದ ಬೆಳ್ತಂಗಡಿ ಉಪವಿಭಾಗಕ್ಕೆ ಡಿವೈಎಸ್ಪಿ ದರ್ಜೆಯ ಅಧಿಕಾರಿ ಸಿ.ಕೆ.ರೋಹಿಣಿ ಅವರನ್ನು ಈಗಾಗಲೇ ನಿಯುಕ್ತಿಗೊಳಿಸಲಾಗಿದೆ. ಅದೇ ರೀತಿ ಬಂಟ್ವಾಳ ತಾಲೂಕಿನಿಂದ ಬೇರ್ಪಟ್ಟು ಉಳ್ಳಾಲ ತಾಲೂಕಿಗೆ ಸೇರಿರುವ ಬಂಟ್ವಾಳ, ಉಳ್ಳಾಲದ ತಾಲೂಕಿನ ಗಡಿ ಭಾಗವಾದ ಸಜಿಪದಲ್ಲಿ ಹೊಸದಾಗಿ ಪೊಲೀಸ್ ಠಾಣೆ ತೆರೆಯುವ ಪ್ರಸ್ತಾಪ ಇಲಾಖಾ ಮಟ್ಟದಲ್ಲಿದೆ ಎಂದು ತಿಳಿದು ಬಂದಿದೆ. ಮಾಣಿ, ಸಜಿಪದಲ್ಲಿ ಪ್ರತ್ಯೇಕ ಎರಡು ಪೊಲೀಸ್ ಠಾಣೆ ತೆರೆದರೆ ಬಂಟ್ವಾಳದ ಎರಡು ಠಾಣೆಗಳ ಕಾರ್ಯದೊತ್ತಡ ಕಡಿಮೆಯಾಗಲಿದೆ. ಆಗ ಈ ಎರಡು ಠಾಣೆಗಳು ಬಂಟ್ವಾಳ ಪೊಲೀಸ್ ಉಪವಿಭಾಗಕ್ಕೆ ಸೇರಲಿವೆ.

ತನಿಖೆ ದೃಷ್ಟಿಯಿಂದ ಅನುಕೂಲ: ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲಿರುವ ಬ್ರಿಟಿಷ್ ಕಾಲದ ಹಳೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಯನ್ನು ಸುಂದರಗೊಳಿಸಿ ಡಿವೈಎಸ್ಪಿ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ಆರಂಭಿಕ ಹಂತದಲ್ಲಿ ಬಂಟ್ವಾಳ ನಗರ, ಗ್ರಾಮಾಂತರ, ಸಂಚಾರಿ, ವಿಟ್ಲ ಮಾತ್ರವಲ್ಲ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ ಪೊಲೀಸ್ ಠಾಣೆ ಬಂಟ್ವಾಳ ಪೊಲೀಸ್ ಉಪವಿಭಾಗ ವ್ಯಾಪ್ತಿಯನ್ನು ಹೊಂದಿತ್ತು.

ಇದೀಗ ಬೆಳ್ತಂಗಡಿಯನ್ನು ಕೇಂದ್ರೀಕರಿಸಿ ಗಡಿ ಭಾಗವಾದ ವೇಣೂರು, ಕಡಬ ತಾಲೂಕುವರೆಗೂ ಸೇರಿಸಿಕೊಂಡು ಹೊಸದಾಗಿ ಪೊಲೀಸ್ ಉಪ ವಿಭಾಗ ಕಾರ್ಯರೂಪಕ್ಕೆ ತಂದಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಗಂಭೀರ ಪ್ರಕರಣಗಳಾದಾಗ ಅದರ ತನಿಖೆ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ಬೆಳ್ತಂಗಡಿಯ ಹೊಸ ಡಿವೈಎಸ್‌ಪಿಯವರು ಸದ್ಯಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಇನ್ನೆರಡು ಠಾಣೆ ಅಸ್ತಿತ್ವಕ್ಕೆ?: ಬಂಟ್ವಾಳ ತಾಲೂಕು ವಿಸ್ತಾರವಾಗಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ೩೦ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಮಾಣಿಯಲ್ಲಿ ಪೊಲೀಸ್ ಠಾಣೆ ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿದೆ. ಮಾಣಿ ಅಕ್ಕಪಕ್ಕದ ಕೆಲವು ಗ್ರಾಮಗಳು ವಿಟ್ಲ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಯಾವುದೇ ಘಟನೆಗಳಾದಾಗ ಪೊಲೀಸರು ಸ್ಥಳಕ್ಕಾಗಮಿಸಲು ಒಂದಷ್ಟು ಹೊತ್ತು ತಗಲುತ್ತದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಸಹಿತ ಸ್ಥಳೀಯವಾಗಿ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಣಿಯಲ್ಲಿ ಪೂರ್ಣಕಾಲಿಕವಾದ ಪೊಲೀಸ್ ಠಾಣೆ ತೆರೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ರೋಹಿಣಿ ಸಿ.ಕೆ. ಕರ್ತವ್ಯಕ್ಕೆ ಹಾಜರು: ಬೆಳ್ತಂಗಡಿ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಸಿ.ಕೆ. ರೋಹಿಣಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಂಗಳೂರು ಮಲ್ಲೇಶ್ವರಂನವರಾಗಿರುವ ರೋಹಿಣಿ ಅವರು ಬೆಂಗಳೂರು ವೈಟ್ ಫೀಲ್ಡ್ ಸೆನ್ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ೨೦೨೨ರ ಬ್ಯಾಚ್‌ನಲ್ಲಿ ನೇರ ನೇಮಕವಾಗಿರುವ ಸಿ.ಕೆ. ರೋಹಿಣಿ ಅವರು ಸಿಐಡಿಗೆ ವರ್ಗಾವಣೆಯ ನಿರೀಕ್ಷೆಯಲ್ಲಿದ್ದರು. ಅದನ್ನು ಮಾರ್ಪಡಿಸಿ ಸರಕಾರ ಅವರನ್ನು ಹೊಸದಾಗಿ ಸೃಜನೆಯಾಗಿರುವ ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿಯಾಗಿ ನ.೪ರಂದು ನೇಮಕ ಮಾಡಿದೆ. ನ.೧೦ರಂದು ಅವರು ಕರ್ತವ್ಯಕ್ಕೆ ಹಾಜರಾದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ್ ಮತ್ತು ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಕಡಬ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸ್ವಾಗತಿಸಿ ಬರ ಮಾಡಿಕೊಂಡರು.

Exit mobile version