Site icon Suddi Belthangady

ಸರ್ಕಾರ ತಟ್ಟೆ ಹಿಡಿದು ಭಿಕ್ಷೆ ಎತ್ತಲಿ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ನಮ್ಮ ತಾಲೂಕನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಇಲ್ಲಿ ಡಿವೈಎಸ್‌ಪಿ ಉಪವಿಭಾಗ ಆರಂಭಿಸಿದೆ. ಉಪವಿಭಾಗ ಮಾಡುವ ಮೂಲಕ ಸಾಮಾನ್ಯ ಜನರನ್ನು ಕಷದ ಹಾದಿಗೆ ಸಿಲುಕುವಂತೆ ಮಾಡಿದೆ. ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಸರ್ಕಾರ ಏಕಾಏಕಿ ಉಪವಿಭಾಗ ರಚನೆ ಮಾಡಿದೆ. ಇದರಿಂದಾಗಿ ಇನ್ನು ಮುಂದೆ ಸಣ್ಣ ಪುಟ್ಟ ಕೆಲಸಗಳಿಗೂ ಜನರು ಡಿವೈಎಸ್‌ಪಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರದ ಈ ನಡೆಯನ್ನು ಶಾಸಕನಾಗಿ ನಾನು ಖಂಡಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಆಕ್ರೋಶ ಹೊರ ಹಾಕಿದ್ದಾರೆ.

ಉಜಿರೆ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ನ.೧೨ರಂದು ತುರ್ತು ಪತ್ರಿಕಾಗೋಷ್ಠಿ ಕರೆದ ಶಾಸಕ ಹರೀಶ್ ಪೂಂಜ, ಐದು ವಷಗಳ ಹಿಂದೆ ಶಾಸಕನಾದ ಮೊದಲ ವಷದಲ್ಲಿ ತಾಲೂಕಿನಲ್ಲಿ ಉಪವಿಭಾಗ ರಚನೆಯಾಗಬಾರದು ಎಂದು ಆಗ ಇದ್ದ ಬಿಜೆಪಿ ಸರ್ಕಾರದ ಜೊತೆ ಮನವಿ ಮಾಡಿದ್ದೆ. ಅದನ್ನು ಪುರಸ್ಕರಿಸಿ ಬೇರೆ ತಾಲೂಕಿನಲ್ಲಿ ಉಪವಿಭಾಗ ರಚನೆಯಾದರೂ, ಬೆಳ್ತಂಗಡಿಯ ಉಪವಿಭಾಗವನ್ನು ರದ್ದು ಮಾಡಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರವು ಬೆಳ್ತಂಗಡಿಯಲ್ಲಿ ಪೊಲೀಸ್ ಇಲಾಖೆಯ ಉಪವಿಭಾಗ ರಚನೆ ಮಾಡಿದೆ. ಇದನ್ನು ತೀವ್ರವಾಗಿ ಖಂಡನೆ ಮಾಡುತ್ತೇನೆ. ತಾಲೂಕಿನಲ್ಲಿ ನಗರದಲ್ಲಿ ವೃತ್ತ ನಿರೀಕ್ಷಕ, ಗ್ರಾಮೀಣ ಸಬ್ ಇನ್ಸ್‌ಪೆಕ್ಟರ್ ಕೂಡ ಇದ್ದಾರೆ. ಆದರೂ ಇನ್ನು ಮುಂದೆ ತಾಲೂಕಿನ ಸಣ್ಣ ಪುಟ್ಟ ವಿಚಾರಗಳನ್ನು ಡಿವೈಎಸ್‌ಪಿ ನಿಯಂತ್ರಣ ಮಾಡುತ್ತಾರೆ. ಜನ ಸಾಮಾನ್ಯರು ಪೊಲೀಸ್ ಕಚೇರಿಗೆ, ಡಿವೈಎಸ್‌ಪಿ ಕಚೇರಿಗೆ ಅಲೆದಾಡಬೇಕಾಗುತ್ತದೆ. ಶಾಂತಿಯುತ ಜೀವನ ನಡೆಸಲು ಕಷ್ಟಕರವಾಗುತ್ತದೆ ಎಂದು ಕಿಡಿಕಾರಿದರು.

ಶಾಸಕನಾಗುವ ಮೊದಲು ಇಲ್ಲಿ ಟ್ರಾಫಿಕ್ ಸ್ಟೇಷನ್ ಮಾಡಬೇಕು ಎಂದು ಹೇಳಿದಾಗ ವಿರೋಧ ಮಾಡಿದ್ದೆ. ಆದರೆ ಅದನ್ನು ಏನು ಮಾಡಲು ಸಾಧ್ಯವಾಗಲಿಲ್ಲ. ಆದರೆ ಈಗ ನಾವು ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಪ್ರತಿ ಪೊಲೀಸ್ ಠಾಣೆಗಳಿಗೆ ದಿನಕ್ಕೆ ಇಷ ದೂರು ದಾಖಲು ಆಗಬೇಕು ಎಂದು ಗುರಿ ಕೊಟ್ಟಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ಅಟೋ ಚಾಲಕರ ಮೇಲೆ, ಬೈಕ್ ಸವಾರರ ಮೇಲೆ, ಟೆಂಪೋ, ಪಿಕಪ್, ಲಾರಿ ಚಾಲಕರ ಮೇಲೆ ಬೇಕಾಬಿಟ್ಟಿ ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಬಳಿ ಕೇಳಿದರೆ ನಾವು ಏನು ಮಾಡುವುದು. ಸರ್ಕಾರದ ಸೂಚನೆ ಇದೆ ಎಂದು ಹೇಳುತ್ತಾರೆ. ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಹಿಡಿದು ದಂಡ ವಸೂಲಿ ಮಾಡುತ್ತದೆ ಎಂದಾದರೆ ಅದರ ಬದಲು ತಟ್ಟೆ ಹಿಡಿದುಕೊಂಡು ಭಿಕ್ಷೆ ಎತ್ತಲು ಹೋಗಬಹುದಲ್ಲವೇ ಎಂದು ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಸರ್ಕಾರ ಜನರಿಂದ ಲೂಟಿ ಮಾಡುತ್ತಿದೆ. ಅಭಿವೃದ್ಧಿ ಕೆಲಸ ಬಿಟ್ಟು ಕುರ್ಚಿ ರಾಜಕಾರಣ ಮಾಡುತ್ತಿದೆ. ತಾಲೂಕಿಗೆ ಡಿವೈಎಸ್‌ಪಿ ಉಪವಿಭಾಗವನ್ನು ನೇಮಕ ಮಾಡಿರುವ ಸರ್ಕಾರದ ನಡೆ ವಿರೋಧಿಸುತ್ತೇನೆ. ತಾಲೂಕಿನಲ್ಲಿ ಜನಪರವಾಗಿ ಕೆಲಸಮಾಡುವ ಕಾಂಗ್ರೆಸಿಗರು ಇದ್ದರೆ ತಕ್ಷಣ ಈ ನೇಮಕವನ್ನು ರದ್ದು ಮಾಡಬೇಕು. ಗೃಹ ಸಚಿವರಿಗೂ ಈ ಬಗ್ಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಏಳು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ: ಉಪ್ಪಿನಂಗಡಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದುರಸ್ತಿಗೆ ಸುಮಾರು ೭ ಬಾರಿ ಸರಕಾರಕ್ಕೆ ಮನವಿ ಮಾಡಿದ್ದೇನೆ. ಅಧಿವೇಶನದಲ್ಲೂ ಈ ಕುರಿತಾಗಿ ಚರ್ಚೆ ಮಾಡಿದ್ದೆ. ಸರಕಾರ ನನಗೆ ನೀಡಿರುವ ೧೨ ಕೋ.ರೂ . ಎಸ್.ಎಚ್.ಡಿ.ಪಿ. ಅನುದಾನವನ್ನು ಬೇರೆ ರಸ್ತೆಗೆ ಮೀಸಲಿರಿಸಿದ್ದೆ. ಆದರೆ ಇದೀಗ ಸರ್ಕಾರ ಉಪ್ಪಿನಂಗಡಿ ರಸ್ತೆಗೆ ಹೆಚ್ಚುವರಿ ಅನುದಾನ ಒದಗಿಸಿಲ್ಲ ಹಾಗೂ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ ಕಾರಣ ನನಗೆ ಬಂದ ಎಸ್.ಎಚ್.ಡಿ.ಪಿ ಯ ೧೨ ಕೋ. ಹಣವನ್ನು ಇದಕ್ಕಾಗಿ ಮೀಸಲಿರಿಸಿzನೆ. ಸರಕಾರ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ರಸ್ತೆ ಸರಿಪಡಿಸುವ ಭರವಸೆ ನೀಡುತ್ತೇನೆ.

ಅರಣ್ಯ ಇಲಾಖೆಯಿಂದ ದೌರ್ಜನ್ಯ: ಬೆಳ್ತಂಗಡಿ ತಾಲೂಕಿನ ಅನೇಕಕಡೆ ಅರಣ್ಯ ಇಲಾಖೆಯ ದೌರ್ಜನ್ಯ ಹೆಚ್ಚಾಗಿದೆ. ಶಿಬಾಜೆ ಹಾಗೂ ಮಲವಂತಿಗೆಯಲ್ಲಿ ಕೃಷಿಕರನ್ನು ಒಕ್ಕಲೆಬ್ಬಿಸಿದ್ದಾರೆ. ಜಂಟಿ ಸರ್ವೇ ಮಾಡದೇ ಇರುವುದೇ ಇದಕ್ಕೆಲ್ಲಾ ಕಾರಣ. ರೆಖ್ಯದಲ್ಲಿ ಜಂಟಿ ಸರ್ವೇ ಮಾಡಿಸಿದ ಕಾರಣ ೭೦೦ ಎಕರೆ ಹೆಚ್ಚುವರಿ ಜಾಗ ರೈತರಿಗೆ ಸಿಕ್ಕಿದೆ. ಅರಣ್ಯ ಇಲಾಖೆಯು ಕೃಷಿಕರ ಮೇಲೆ ಮಾಡುವ ದೌರ್ಜನ್ಯವನ್ನು ನಿಲ್ಲಿಸಬೇಕು. ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಸಲಹೆ ನೀಡಬೇಕು. ಈ ಸಮಸ್ಯೆ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಸರ್ಕಾರದಿಂದ ಅನುದಾನದ ಕೊರತೆ: ಸರ್ಕಾರದಿಂದ ಬೆಳ್ತಂಗಡಿಯಿಂದ ಮೂಲ್ಕಿಗೆ ಹೋಗುವ ವೇಣೂರು ದಾರಿಯ ಒಟ್ಟು ೧೬ ಕಿ.ಮೀ ರಸ್ತೆಯ ಗುಂಡಿ ಮುಚ್ಚಲು ರೂ. ೧೮ ಲಕ್ಷ, ರಾಜ್ಯ ಹೆದ್ದಾರಿ ಬೈಚಾರ್‌ನಿಂದ ದಿಡುಪೆಯ ಗೋಳಿತೊಟ್ಟಿನ ೪೧ ಕಿಮೀ ರಸ್ತೆಗೆ ರೂ. ೩೦ ಲಕ್ಷ ಅನುದಾನ ಬಿಡುಗಡೆ ಮಾಡಿದೆ. ನಿರ್ವಹಣಾ ವೆಚ್ಚವನ್ನೂ ಸರ್ಕಾರದಿಂದ ಕೊಡಲು ಸಾಧ್ಯವಾಗಿಲ್ಲ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಉಜಿರೆ – ಪೆರಿಯಶಾಂತಿ ರಸ್ತೆಗೆ ರೂ. ೬೧೬ ಕೋಟಿ – ಶೀಘ್ರವೇ ಕಳೆಂಜದ ೩೦೯ ಸರ್ವೇ ಸಂಖ್ಯೆಯ ಸರ್ವೇ: ಉಜಿರೆ – ಪೆರಿಯಶಾಂತಿ ಸ್ಟರ್ ರಸ್ತೆಗೆ ೬೧೬ ಕೋಟಿ ರೂ ಅನುದಾನ ಬಂದಿದೆ. ಸಂಸದರ ನೇತೃತ್ವದಲ್ಲಿ ಇನ್ನು ಹತ್ತುದಿನದ ಒಳಗೆ ಶಿಲಾನ್ಯಾಸ ನೆರವೇರಲಿದೆ. ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಕಾಮಗಾರಿ ವೇಗವಾಗಿ ಆಗುತ್ತಿದೆ ಎಂದರು. ಕಳೆಂಜದ ೩೦೯ ಸರ್ವೇ ಸಂಖ್ಯೆಯನ್ನು ಕಂದಾಯ, ಅರಣ್ಯ ಇಲಾಖೆ, ಗ್ರಾಮಸ್ಥರು ಹಾಗೂ ಖಾಸಗಿ ಸರ್ವೇದಾರರ ಮೂಲಕ ಶೀಘ್ರವೇ ಸರ್ವೇ ಮಾಡಲಾಗುತ್ತದೆ ಎಂದು ಹೇಳಿದರು.

೨ ಕೋ. ರೂ ಅನುದಾನ: ಬೆಳ್ತಂಗಡಿಯ ಅಯ್ಯಪ್ಪಗುಡಿಯಿಂದ ಹುಣ್ಸೆಕಟ್ಟೆ – ಮಲ್ಲೊಟ್ಟು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದರ ದುರಸ್ತಿಗಾಗಿ ರಾಜ್ಯ ಸಬಾ ಸದಸ್ಯ ಡಾ. ಖ. ವೀರೇಂದ್ರ ಹೆಗ್ಗಡೆಯವರು ರಾಜ್ಯ ಸಭಾ ನಿಧಿಯಿಂದ ೨. ಕೋಟಿ ಅನುದಾನ ನೀಡಿದ್ದಾರೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗುತ್ತದೆ ಎಂದು ಭರವಸೆ ನೀಡಿದರು. ನಗರದಲ್ಲಿ ಎಲ್ಲಿಯಾದರೂ ಕಳಪೆ ಕಾಮಗಾರಿ ಕಂಡು ಬಂದರೆ ಅದರ ಕುರಿತಾಗಿ ತಕ್ಷಣ ದೂರು ನೀಡಿ ಎಂದು ಹೇಳಿದರು.

ದೆಹಲಿ ಸ್ಪೋಟಕ್ಕೆ ಖಂಡನೆ: ಇದೇ ವೇಳೆ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭೀಕರ ಸ್ಪೋಟವನ್ನು ಖಂಡಿಸಿದ ಶಾಸಕ ಹರೀಶ್ ಪೂಂಜ, ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರ ಭಯೋತ್ಪಾದಕರನ್ನು ಬಂಧಿಸುವ ಕೆಲಸ ಮಾಡಿದೆ ಎಂದು ಹೇಳಿ ಸ್ಪೋಟದಲ್ಲಿ ಮೃತಪಟ್ಟ ಅಮಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಾರಂತ್, ಉಪಾಧ್ಯಕ್ಷ ರವಿ ಬರಮೇಲು ಉಪಸ್ಥಿತರಿದ್ದರು.

ಶಾಸಕರ ಎಸ್‌ಹೆಚ್‌ಡಿಪಿಯ ರೂ. ೧೨ಕೋಟಿ ಅನುದಾನ ಇಟ್ಟಿzನೆ-ಸರ್ಕಾರ ಟೆಂಡರ್ ಪ್ರಕ್ರಿಯೆ ಮಾಡಬೇಕಿದೆ: ಉಪ್ಪಿನಂಗಡಿ ರಸ್ತೆಗೆ ಗೃಹಸಚಿವರು ಅನುದಾನ ಕೊಡುತ್ತೇನೆ ಅಂದಿದ್ದರು. ಆದರೆ ಅಧಿವೇಶನ ಆಗಿ ಮೂರ್ನಾಲ್ಕು ತಿಂಗಳಾದರೂ ಈವರೆಗೆ ಯಾವುದೇ ಅನುದಾನ ಕೊಟ್ಟಿಲ್ಲ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ರೂ. ೧೨ ಕೋಟಿ ಶಾಸಕರ ವಿವೇಚನೆಯಡಿಯಲ್ಲಿ ಕಾಮಗಾರಿ ಮಾಡಲು ಅನುದಾನವಿದೆ. ಆ ಅನುದಾನ ನಮ್ಮ ತಾಲೂಕಿಗೂ ಬಂದಿತ್ತು. ಈ ಬಗ್ಗೆ ಲೋಕೋಪಯೋಗಿ ಸಚಿವರಲ್ಲಿಯೂ ನಾನು ಭೇಟಿಯಾಗಿ ರಸ್ತೆಯ ಬಗ್ಗೆ ಮಾತನಾಡಿದ್ದೇನೆ. ಗೃಹ ಸಚಿವರು ಉಪ್ಪಿನಂಗಡಿ ರಸ್ತೆಗೆ ಅನುದಾನ ನೀಡುತ್ತೇನೆ ಅಂತ ಒಪ್ಪಿಕೊಂಡಿದ್ದರಿಂದ ನಾನು ಎಸ್‌ಎಸ್‌ಡಿಪಿ ಅನುದಾನವನ್ನು ಬೇರೆ ಕಾಮಗಾರಿಗೆ ಇಡುತ್ತೇನೆ. ಸರ್ಕಾರ ಒಪ್ಪಿಕೊಂಡಂತೆ ನೀವು ಉಪ್ಪಿನಂಗಡಿ ರಸ್ತೆಗೆ ಅನುದಾನ ನೀಡ್ತೀರಾ ಅಂತ ಲೋಕೋಪಯೋಗಿ ಸಚಿವರಲ್ಲಿ ಕೇಳಿದ್ದೆ. ಆಗ ಅವರು ಖಂಡಿತಾ ಈಗ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಇದರಿಂದಾಗಿ ಶಾಸಕನ ವಿವೇಚನೆಯಡಿ ಕಾಮಗಾರಿ ನಡೆಸಲು ಬಂದಿರುವ ಎಸ್‌ಹೆಚ್‌ಡಿಪಿ ೧೨ ಕೋಟಿ ಅನುದಾನವನ್ನು ಉಪ್ಪಿನಂಗಡಿ ರಸ್ತೆಗೆ ಇಡುವ ಕೆಲಸ ಮಾಡಿದ್ದೇನೆ. ಈಗಾಗಲೇ ಇಲಾಖೆಯಲ್ಲಿ ಅದರ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ಯಾವಾಗ ಆದೇಶ ಕೊಡುತ್ತದೋ, ಯಾವಾಗ ಟೆಂಡರ್ ಪ್ರಕ್ರಿಯೆ ಮುಗಿಸುತ್ತದೋ ಆವಾಗ ಕಾಮಗಾರಿ ಪ್ರಾರಂಭಗೊಳ್ಳುವ ನಿರೀಕ್ಷೆಯಲ್ಲಿ ನಾವಿದ್ದೇವೆ.-ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ

Exit mobile version