ಕಕ್ಯಪದವು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಉಳಿ ಹಾಗೂ ದ.ಕ.ಜಿ.ಪಂ.ಹಿ. ಪ್ರಾ.ಶಾಲೆ ಬಡಗ ಕಜೆಕಾರು ಇದರ ಸಹಭಾಗಿತ್ವದಲ್ಲಿ ಉಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ನ.12ರಂದು ಬಡಗ ಕಜೆಕಾರು ಶಾಲೆಯಲ್ಲಿ ನಡೆಯಿತು.
ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ಹಾಗೂ ಸ್ಪರ್ಧಾ ಮನೋಭಾವವನ್ನು ಬೆಳೆಸಲು ಈ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಎಲ್. ಸಿ. ಆರ್. ವಿದ್ಯಾ ಸಂಸ್ಥೆಯ ಪ್ರಾಥಮಿಕ ವಿಭಾಗದ ಒಟ್ಟು 26 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಒಟ್ಟು 10 ಪ್ರಥಮ, 8 ದ್ವಿತೀಯ ಹಾಗೂ 6 ತೃತೀಯ ಬಹುಮಾನಗಳನ್ನು ಪಡೆಯುವುದರ ಮೂಲಕ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪ್ರಥಮ ಸ್ಥಾನ ಪಡೆದ 10 ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾಕಾರಂಜಿಗೆ ಆಯ್ಕೆಯಾಗಿದ್ದು, ಭಾಗವಹಿಸಿದ ಹಾಗೂ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ,ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿ ಶುಭ ಹಾರೈಸಿದರು.

