ಬೆಳ್ತಂಗಡಿ: ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಎಂಬವರ ಪುತ್ರಿ ಹರ್ಷಿತಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಘಟನೆಯ ವಿವರ: ಶ್ರೀಧರ ಕುಂಬಾರ ಅವರ ಪುತ್ರಿ ಹರ್ಷಿತಾ(15 ವ) ಎಂಬಾಕೆ ಉಪ್ಪಿನಂಗಡಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ನ. 4ರಂದು ತಲೆನೋವು ಎಂದು ಹೇಳಿ ಶಾಲೆಗೆ ಹೋಗದೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಪಾರಡ್ಕ ಎಂಬಲ್ಲಿರುವ ತಮ್ಮ ಮನೆಯಲ್ಲಿದ್ದವಳು ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಳು. ವಿಷಯ ತಿಳಿದು ಕೂಲಿ ಕೆಲಸಕ್ಕೆ ಹೋಗಿದ್ದ ಶ್ರೀಧರ ಕುಂಬಾರ ಅವರ ಪತ್ನಿ ಗೀತಾರವರು ಮನೆಗೆ ಬಂದು ಒಂದು ಆಟೋ ರಿಕ್ಷಾದಲ್ಲಿ ಹರ್ಷಿತಾಳನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಆಂಬ್ಯುಲೆನ್ ನಲ್ಲಿ ಮಂಗಳೂರು ವೆನ್ಸಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಶ್ರೀಧರ ಕುಂಬಾರ ಅವರು ಕೂಡಲೇ ಹೊರಟು ಮಂಗಳೂರು ವೆನ್ಸಾಕ್ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗಳನ್ನು ನೋಡಿದ್ದರು. ಆ ವೇಳೆ ಆಕೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಹರ್ಷಿತಾ ನ.12ರಂದು ಮೃತಪಟ್ಟಿರುತ್ತಾಳೆ. ಹರ್ಷಿತಾಳಿಗೆ ಕಡಬದ ರಾಜೇಶ್ ಎಂಬಾತನು ಪೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇರುವುದರಿಂದ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ಇರುತ್ತದೆ. ಅವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಅಥವಾ ಕಾರಣ ತಿಳಿದಿರುವುದಿಲ್ಲ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

