


ಬೆಳ್ತಂಗಡಿ: ಇಲ್ಲಿನ ಕುತ್ಲೂರು ಗ್ರಾಮದ ಮಂಜುಶ್ರೀ ನಗರ ಶ್ರೀ ಅನಘ ಎಂಬಲ್ಲಿನ ನಿವಾಸಿ ಶಿಕ್ಷಕ ಅವಿನಾಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಒಡೆದು 9.5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೇಣೂರು ಪೊಲೀಸರು ಅಂತರರಾಜ್ಯ ಕಳ್ಳ ಇತ್ತೆಬರ್ಪೆ ಅಬೂಬಕ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.


ಚಿಕ್ಕಮಗಳೂರು ತಾಲ್ಲೂಕಿನ ವಾಟರ್ ಟ್ಯಾಂಕ್ ಸಮೀಪದ ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ (ಇತ್ತೆ ಬರ್ಪೆ ಅಬೂಬಕ್ಕರ್) ಬಂಧಿತ ಆರೋಪಿಯಾಗಿದ್ದು, ಈತ 90ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಕುತ್ಲೂರಿನ ಅವಿನಾಶ್ ಮನೆಯವರು ಅ. 2ರಂದು ಮನೆಗೆ ಬೀಗ ಹಾಕಿ ಹೋಗಿದ್ದು, ಅ.6ರಂದು ಬಂದು ನೋಡಿದಾಗ ಮನೆಯ ಬೀಗ ಒಡೆದಿದ್ದು ಕಳ್ಳತನವಾಗಿರುವುದು ಕಂಡು ಬಂದಿದೆ. ಮನೆಯೊಳಗೆ ಪ್ರವೇಶಿಸಿದ ಕಳ್ಳರು ಬೆಡ್ ರೂಮಿನ ಕಪಾಟಿನ ಬೀಗ ಒಡೆದು ಅದರೊಳಗೆ ಇಟ್ಟಿದ್ದ ಎರಡೆಳೆಯ ಚಿನ್ನದ ಕರಿಮಣಿ ಸರ, ಮುತ್ತಿನ ಸರ, ಚಿನ್ನದ ಬ್ರಾಸ್ ಲೈಟ್, ಮಕ್ಕಳ ಎರಡು ಸರಗಳು, ಒಂದು ಉಂಗುರ, ಒಂದು ಬಡೋಲೆ, ಚಿನ್ನದ ಉಂಗುರಗಳು ಸೇರಿದಂತೆ ಸುಮಾರು 149 ಗ್ರಾಂ. ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿತ್ತು. ಇದೀಗ ಆರೋಪಿ ಅಬೂಬಕ್ಕರ್ ನನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದು,ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.









