ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನ. 10ರಂದು “ಅಗ್ನಿ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು” ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಎಸ್. ಡಿ. ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಆಯೋಜಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ಮುಖ್ಯ ಅತಿಥಿಗಳಾಗಿ ನೀಲಯ್ಯ ಗೌಡ, ಮುಖ್ಯ ಅತಿಥಿಗಳಾಗಿ ಉಸ್ಮಾನ್ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಅಗ್ನಿ ಅವಘಡದ ಸಮಯದಲ್ಲಿ ಶಾಂತವಾಗಿ ಮತ್ತು ಸುರಕ್ಷಿತವಾಗಿ ವರ್ತಿಸುವ ನೈಪುಣ್ಯವನ್ನು ಬೆಳೆಸುವುದಾಗಿತ್ತು.
ಕಾರ್ಯಕ್ರಮವನ್ನು ಸ್ಥಳೀಯ ಅಗ್ನಿಶಾಮಕ ದಳದ ಅಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು. ಪ್ರಾರಂಭದಲ್ಲಿ ಅಗ್ನಿಶಾಮಕ ಅಧಿಕಾರಿ ಉಸ್ಮಾನ್ ಅವರು ಅಗ್ನಿ ಸಂಭವಿಸುವ ಕಾರಣಗಳು, ಅಗ್ನಿಯ ವಿಧಗಳು ಹಾಗೂ ಅದರ ನಿಯಂತ್ರಣ ವಿಧಾನಗಳ ಬಗ್ಗೆ ವಿವರಿಸಿದರು. ಅವರು ಗ್ಯಾಸ್ ಲೀಕ್ ಆಗುವಾಗ ತೆಗೆದುಕೊಳ್ಳಬೇಕಾದ ಕ್ರಮಗಳು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗುವ ಬೆಂಕಿಯನ್ನು ಹೇಗೆ ನಂದಿಸಬೇಕು ಎಂಬುದರ ಕುರಿತು ಸ್ಪಷ್ಟವಾದ ಮಾಹಿತಿ ನೀಡಿದರು.
ನಂತರ ಪ್ರಾಯೋಗಿಕ ಪ್ರದರ್ಶನ (ಪ್ರಾತ್ಯಕ್ಷಿಕೆ) ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ಉಪಕರಣಗಳನ್ನು ಹೇಗೆ ಬಳಸಿ ಬೆಂಕಿ ನಂದಿಸಬಹುದು ಎಂಬುದನ್ನು ತೋರಿಸಲಾಯಿತು. ಕೆಲವು ವಿದ್ಯಾರ್ಥಿಗಳಿಗೆ ಸಹ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಪ್ರಶಿಕ್ಷಣಾರ್ಥಿ ವಾಹಿನಿ ಅವರು ಸ್ವಾಗತಿಸಿ, ಪ್ರಶಿಕ್ಷಣಾರ್ಥಿ ನೀದು ಅವರು ಕಾರ್ಯಕ್ರಮ ನಿರೂಪಿಸಿದರು. ಅಖಿಲ ಅವರು ಧನ್ಯವಾದಗಳನ್ನು ಅರ್ಪಿಸಿದರು.

