ಉಜಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಬಾಲಕ – ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ ಉಜಿರೆಯ ಎಸ್.ಡಿ.ಎಂ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಿತು.
ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ರಾಷ್ಟ್ರೀಯ ಆಟಗಾರ, ಪ್ರಸ್ತುತ ಬೆಳ್ತಂಗಡಿ ಎಕ್ಸಿಸ್ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಆಗಿರುವ ಅರ್ವಿನ್ ಲೋಯ್ ಮೋರಸ್ ಪಂದ್ಯಾಟವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕ್ರೀಡೆಯನ್ನು ಪಠ್ಯದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿದೆ. ಸಂಸ್ಥೆಯ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಕ್ರೀಡಾ ವಿಭಾಗಕ್ಕೆ ಸರ್ವ ರೀತಿಯ ಸಹಕಾರ ಮತ್ತು ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಉದಾಹರಣೆಯಾಗಿ ಸುಸಜ್ಜಿತವಾದ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣವನ್ನು ಕಾಣಬವುದು. ಇದು ಕ್ರೀಡಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸುತ್ತಲಿನ ಪರಿಸರದ ಸರ್ವ ಜನರಿಗೂ ಪ್ರಯೋಜನಕಾರಿಯಾಗಿದೆ.
ಸಂಸ್ಥೆಯ ಈ ಕ್ರೀಡಾಂಗಣ ಮತ್ತು ತರಬೇತಿಯಿಂದ ಹಲವಾರು ಜನ ಉನ್ನತ ಮಟ್ಟಕ್ಕೇರಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹ ಪ್ರಯತ್ನ ಮತ್ತು ಸಾಧನೆ ನಿಮ್ಮೆಲ್ಲರಿಗೂ ಸಾಧ್ಯವಿದೆ ಎಂದರು.
ಇಂಡಿಯನ್ ಪೋಸ್ಟಲ್ ಸೇವೆಗೆ ತನ್ನ ಕ್ರೀಡಾ ಸಾಧನೆಯ ಮೂಲಕ ಆಯ್ಕೆಯಾದ ಎಸ್.ಡಿ.ಎಂ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟು ನಿತಿನ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ರಾಜೇಶ್, ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್, ಅಲೋಶಿಯಸ್ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ನವೀನ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರು, ಸಿಬ್ಬಂದಿಗಳು, ಸಂಸ್ಥೆಯ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಪಟುಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ್ ಜೈನ್ ನಿರೂಪಿಸಿ, ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಬಿ.ಪೂಂಜ ವಂದಿಸಿದರು.

