ಉಜಿರೆ: ನಮ್ಮ ಪರಿಸರದಲ್ಲಿ ಅಮೂಲ್ಯವಾದ ಔಷಧೀಯ ಗುಣಗಳುಳ್ಳ ಸಾವಿರಾರು ಸಸ್ಯ ಪ್ರಭೇದಗಳಿದ್ದು ಅವುಗಳನ್ನು ಶಾಸ್ತ್ರೀಯವಾದ ರೀತಿಯಲ್ಲಿ ಕೃಷಿ ಮಾಡಿದರೆ ರೈತರು ವಿಪುಲವಾದ ಆದಾಯ ಗಳಿಸಲು ಸಾಧ್ಯವಿದೆ, ಇಂದಿನ ಆಯುರ್ವೇದ ಹಾಗೂ ಪರಂಪರಾನುಗತ ಔಷಧೀಯ ತಯಾರಿಕೆಯಲ್ಲಿ ಈ ಸಸ್ಯಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ಈ ಸಸ್ಯಗಳಿಗೆ ಅಪಾರವಾದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ರೈತರು ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕೆಂದು ರಾಷ್ಟ್ರೀಯ ಔಷಧೀಯ ಸಸ್ಯಗಳ ನಿಗಮದ ಕೇರಳ ವಿಭಾಗದ ವ್ಯವಸ್ಥಾಪಕರಾದ ವಿಜ್ಞಾನಿ ಡಾ. ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಕೃಷಿಕರು ಹತ್ತಾರು ಎಕರೆ ಪ್ರದೇಶದಲ್ಲಿ ಔಷಧೀಯ ಸಸ್ಯಗಳನ್ನ ಬೆಳೆಸಿ ಮಾರುಕಟ್ಟೆಯಲ್ಲಿ ನಿಯಮಿತವಾಗಿ ವಿತರಿಸುತ್ತ ಒಳ್ಳೆಯ ಆದಾಯವನ್ನು ಗಳಿಸುತ್ತಿರುವ ಮಾದರಿಗಳನ್ನು ಉದಾಹರಣೆ ಸಹಿತ ಅವರು ವಿವರಿಸಿದರು. ಕೃಷಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ಔಷಧೀಯ ಸಸ್ಯಗಳನ್ನು ಉಚಿತವಾಗಿ ವಿತರಿಸಿ ಪ್ರೋತ್ಸಾಹಿಸಲಾಯಿತು.
ಉಜಿರೆ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ ಅವರು ಮಾತನಾಡುತ್ತಾ ಈ ಭಾಗದಲ್ಲಿ ಬೆಳೆಯಬಹುದಾದ ಔಷಧೀಯ ಸಸ್ಯಗಳು, ಅವುಗಳಿಗೆ ಮಾರುಕಟ್ಟೆಯಲ್ಲಿರುವ ಬೇಡಿಕೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಲಾಶ್ ಕೆ.ಎಸ್. ಅವರು ಸಂಯೋಜಿಸಿ ನಿರ್ವಹಿಸಿದರು.

