Site icon Suddi Belthangady

ನ.11-13: ಬೆಳ್ತಂಗಡಿ ಜಿಲ್ಲಾ ಕೃಷಿ ಕೇಂದ್ರದಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮ, ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಮಂತ್ರಾಲಯ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ PMFME ಯೋಜನೆ ಅಡಿ ಸಾಲ ಮಂಜೂರಾತಿ ಆಗಿರುವವರು, ಅರ್ಜಿ ಸಲ್ಲಿಕೆಯಾಗಿ ಬ್ಯಾಂಕಿನಲ್ಲಿ ಪರಿಶೀಲನೆ ಯಲ್ಲಿರುವವರು ಮತ್ತು ಅರ್ಜಿ ತಿರಸ್ಕೃತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ನೀಡುವ ಮೂರು ದಿನಗಳ ಉಚಿತ ತರಬೇತಿಯನ್ನು ನ.11 ರಿಂದ 13 ವರೆಗೆ ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದು, ತರಬೇತಿಯಲ್ಲಿ ಪಿಎಂಎಫ್ ಎಂಇ ಯೋಜನೆಯ ಫಲಾನುಭವಿಗಳು ಭಾಗವಹಿಸಲು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರ ದೂರವಾಣಿ ಸಂಖ್ಯೆ 8277931067 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ.

ಮೊದಲು ನೋಂದಣಿ ಮಾಡಿಕೊಂಡ 30 ಜನರಿಗೆ ಮೊದಲನೇ ಬ್ಯಾಚ್ ನಲ್ಲಿ ತರಬೇತಿ ಪ್ರಾರಂಭಿಸಿ, ನಂತರ ನೋಂದಣಿ ಮಾಡಿಕೊಂಡವರಿಗೆ ಮುಂದಿನ ಬ್ಯಾಚ್ ನಲ್ಲಿ ತರಬೇತಿಯನ್ನು ನೀಡಲಾಗುವುದು. ನೋಂದಣಿ ಮಾಡಿಸಿಕೊಂಡ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇಲ್ಲಿ ತರಬೇತಿಗಾಗಿ ಪೂರ್ವಾಹ್ನ 10.30ಕ್ಕೆ ಸರಿಯಾಗಿ ಭಾಗವಹಿಸಲು ಕೋರುತ್ತೇವೆ. ತರಬೇತಿ ಕೇಂದ್ರದಲ್ಲಿ ವಸತಿ ವ್ಯವಸ್ಥೆ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುವುದು. ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಪಿಎಂಎಫ್ ಎಂಇ ಯೋಜನೆಯ ಅರ್ಹ ಫಲಾನುಭವಿಗಳಿಗೆ ತರಬೇತಿಯ ಮೂರನೆಯ ದಿನ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಬೆಳ್ತಂಗಡಿ ಕೃಷಿ ಇಲಾಖೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version