ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ನ. 15 ರಿಂದ 20ರವರೆಗೆ ನಡೆಯಲಿದ್ದು ಇದರ ಅಂಗವಾಗಿ ಪೂರ್ವ ತಯಾರಿ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ. ಶ್ರೀನಿವಾಸ್ ರಾವ್ ಇವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು.
ಲಕ್ಷದೀಪೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ವ್ಯವಸ್ಥೆಯ ಬಗ್ಗೆ ಚರ್ಚಿಸಿದರು. ಪೋಲಿಸ್ ಇಲಾಖೆಯಿಂದ ಜನಸಂದಣಿ ಪ್ರದೇಶದಲ್ಲಿ ಅಲ್ಲಲ್ಲಿ ಪೊಲೀಸ್ ಚೆಕ್ ಪೋಸ್ಟ್ ಗಳನ್ನು ನಿಗದಿಪಡಿಸುವುದು. ಹಾಗೂ ಹೆಚ್ಚಿನ ಕಡೆಗಳಲ್ಲಿ ಸಿ.ಸಿ. ಕ್ಯಾಮರಗಳನ್ನು ಅಳವಡಿಸುವುದು. ಬಂದೋಬಸ್ತ್ ಬಗ್ಗೆ ಹೆಚ್ಚಿನ ಪೊಲೀಸ್ ನಿಯೋಜನೆ ಬಗ್ಗೆ ಕ್ರಮ ಕೈಗೊಳ್ಳಲಾಯಿತು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ಹೆಚ್ಚಿನ ಜನಸಂದಣಿ ಆಗುವ ಕಾರಣ ಪಾರ್ಕಿಂಗ್ ವ್ಯವಸ್ಥೆ ಹಾಗೂ ಪರ್ಯಾಯ ರಸ್ತೆಗಳ ಬಗ್ಗೆ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಕಲ್ಲೇರಿ ಮಾರ್ಗವಾಗಿ ನೇರವಾಗಿ ದೇವಸ್ಥಾನದ ಪಾರ್ಕಿಂಗ್ ಮೈದಾನಕ್ಕೆ ಪ್ರವೇಶ ಕಲ್ಪಿಸುವ ಬಗ್ಗೆ ಹಾಗೂ ಶರಾವತಿ ಪಾಂಗಳ ನೇತ್ರಾವತಿ ಮಾರ್ಗವಾಗಿ ವಾಹನಗಳು ಹೊರಗೆ ಹೊರಗಡೆ ಹೋಗಲು ವ್ಯವಸ್ಥೆಯನ್ನು ಕಲ್ಪಿಸುವುದು.
ಹಾಗೂ ನೇತ್ರಾವತಿ ಜೋಡುಸ್ತಾನ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗಲು ಪರ್ಯಾಯ ಮಾರ್ಗವನ್ನು ವ್ಯವಸ್ಥೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಾಗೃತೆ ಮೂಡಿಸುವುದು, ಗ್ರಾಮ ಸ್ವಚ್ಛತೆ ಬಗ್ಗೆ ಪರಿಸರ ಜಾಥವನ್ನು ಮಾಡುವುದು. ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮದ ಬಗ್ಗೆ ಮಾಹಿತಿಯನ್ನು ನೀಡುವ ಬಗ್ಗೆ ತಿಳಿಸಲಾಯಿತು. ಜಾತ್ರಾ ಅಂಗಡಿ ಮಳಿಗೆದಾರರಿಗೆ ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು. ಮೆಸ್ಕಾಂ ಇಲಾಖೆಗೆ ಸಂಬಂಧ ಪಟ್ಟಂತೆ ಹೆಚ್ಚುವರಿ ಸಿಬ್ಬಂದಿ ವ್ಯವಸ್ಥೆಯನ್ನು ಕಲ್ಪಿಸಿಕೊಂಡು. ವಿದ್ಯುತ್ ವ್ಯತ್ಯಾಯವಾಗದಂತೆ ವಿದ್ಯುತ್ ಲೈನ್ ಸಂಪೂರ್ಣವಾಗಿ ರಿಪೇರಿ ಮಾಡುವುದು ಹೆಚ್ಚುವರಿ ವಿದ್ಯುತ್ ಸಂಪರ್ಕದ ಬಗ್ಗೆ ವ್ಯವಸ್ಥೆಯನ್ನು ಕಲ್ಪಿಸುವುದು. ಮಕ್ಕಳನ್ನು ಉಪಯೋಗಿಸಿಕೊಂಡು ಡೊಂಬರಾಟ ಹಾಗೂ ಬಿಕ್ಷಾಟನೆ ಮಾಡುವುದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಲಾಯಿತು.
ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸೆಯ ಬಗ್ಗೆ ದಿನದ 24 ಗಂಟೆ ವ್ಯವಸ್ಥೆಯನ್ನು ಮಾಡುವುದು ಹಾಗೂ ತೆರೆದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದರ ಬಗ್ಗೆ ಜಾಗೃತಿಗೊಳಿಸುವುದು, ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಫಾಗಿಂಗ್ ವ್ಯವಸ್ಥೆಯ ಬಗ್ಗೆ ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳುವುದು. ಎಲ್ಲ ರಸ್ತೆಗಳಲ್ಲಿ ದಾರಿದೀಪದ ವ್ಯವಸ್ಥೆಯನ್ನು ಮಾಡುವುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಸಾರಿಗೆ ವ್ಯವಸ್ಥೆಗೆ ಸಂಬಂಧಪಟ್ಟಂತೆ ಬೇರೆ ಬೇರೆ ವಿಭಾಗದಿಂದ ಸುಮಾರು 300 ಹೆಚ್ಚುವರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವುದು. ಹಾಗೂ ರಸ್ತೆಗಳಲ್ಲಿ ತೊಂದರೆಯಾಗದಂತೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದು. ಸ್ವಚ್ಛತೆಯ ನಿರಂತರತೆಯ ಸುಸ್ಥಿರತೆಯನ್ನು ಕಾಪಾಡುವ ಬಗ್ಗೆ ಧ್ವನಿವರ್ಧಕದ ಮೂಲಕ ಜಾಗೃತಿಯನ್ನು ಮೂಡಿಸುವುದು. ಲಕ್ಷದೀಪೋತ್ಸವ ಜಾತ್ರಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವಂತೆ ಸಭೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಅವರು ಸಭೆಯಲ್ಲಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಕಾರವನ್ನು ನೀಡುವಂತೆ ವಿನಂತಿಸಿದರು.
ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಸುಧಾಕರ ಗೌಡ, ಮುರಳಿಧರ ದಾಸ್, ರಾಮಚಂದ್ರ ರಾವ್, ವಸಂತ ನಾಯ್ಕ, ಕಮಲ, ಸುನಿತಾ ಡಿ.ಕೆ, ಜಯ ಮೋನಪ್ಪ ಗೌಡ, ಲಕ್ಷ್ಮಿ, ವಸಂತಿ, ಕಿಶೋರ್ ಭಂಡಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಪೋಲಿಸ್ ಉಪನಿರೀಕ್ಷಕ ಸಮರ್ಥ್, ಪಂಚಾಯತ್ ಲೆಕ್ಕ ಸಹಾಯಕಿ ಪ್ರಮೀಳಾ, ಮೆಸ್ಕಾಂ ಅಧಿಕಾರಿ ಅಶೋಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಮಾಹಿತಿ ಕಚೇರಿ ಸಿಬ್ಬಂದಿ ವರ್ಗ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ರಾಜ್ಯಮಟ್ಟದ ವಸ್ತು ಪ್ರದರ್ಶನ ಮಳಿಗೆಯ ಅಧಿಕಾರಿಗಳು, ಪೋಲಿಸ್ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಉಪಸ್ಥಿತರಿದ್ದರು.

