ಬೆಳ್ತಂಗಡಿ: ಐದು ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಬಜರಂಗದಳದ ಮುಂದಾಳು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ೧೧ ಮಂದಿ ಆರೋಪಿಗಳ ವಿರುದ್ಧ ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಸಮಾಜದಲ್ಲಿ ಭಯ ಸೃಷ್ಠಿಸುವ, ಭಯೋತ್ಪಾದನೆ ಹರಡುವ ಉದ್ದೇಶದಿಂದ ಹಾಗೂ ಹಳೇ ದ್ವೇಷದಿಂದ ಸುಹಾಸ್ ಶೆಟ್ಟಿಯವರನ್ನು ಹತ್ಯೆ ಮಾಡಲಾಗಿದೆ ಎಂದು ಚಾರ್ಚ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಜೈಲಿನಲ್ಲಿರುವ ಮಂಗಳೂರು ಮೂಲದ ಸಫ್ವಾನ್ ಅಲಿಯಾಸ್ ಕವಲೂರು ಸಫಾನ್, ನಿಯಾಜ್ ಅಲಿಯಾಸ್ ನಿಯಾ, ಮೊಹಮ್ಮದ್ ಮುಸಾಮೀರ್, ನೌಷಾದ್, ಆದಿಲ್ ಮಹರೂಫ್, ಅಜರುದ್ದೀನ್, ಅಬ್ದುಲ್ ಖಾದರ್, ಖಲಂದರ್‌ಶಫಿ, ಎಂ.ನಾಗರಾಜ್, ರಂಜಿತ್ ಮತ್ತು ಮೊಹಮ್ಮದ್ ರಿಜ್ವಾನ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಪೈಕಿ ಆದಿಲ್ ಮಹರೂಫ್ ಸುಹಾಸ್ ಶೆಟ್ಟಿ ಹಂತಕರಿಗೆ ಹಣ ನೀಡಿರುವುದನ್ನು ಉಲ್ಲೇಖಿಸಲಾಗಿದೆ. ಆರೋಪಿಗಳ ಪೈಕಿ ಬಹುತೇಕ ಮಂದಿ ನಿಷೇಧಿತ ಪಿಎಫ್‌ಐ ಹಾಗೂ ಕೆಎಫ್‌ಡಿಯ ಮಾಜಿ ಸದಸ್ಯರು ಎಂದು ಎನ್‌ಐಎ ಮೂಲಗಳು ತಿಳಿಸಿದೆ.
ಮಂಗಳೂರು ಸಮೀಪದ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೦೨೫ರ ಮೇ. ೧ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾರಿಂಜ ಸಮೀಪದ ಸುಹಾಸ್ ಶೆಟ್ಟಿಯವರನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಮಂಗಳೂರು ಪೊಲೀಸರು ೧೨ ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಿತ್ತು.
