ಬೆಳ್ತಂಗಡಿ: ಪದ್ಮುಂಜದಲ್ಲಿ ಸಿದ್ದೀಕ್ ಎಂಬವರು ಚಲಾಯಿಸುತ್ತಿದ್ದ ವಾಹನ ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪಿ ಶರತ್ ಚೌಟ ಎಂಬಾತನಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆಯ ವಿವರ: ೨೦೨೪ರ ಆಗಸ್ಟ್ ೨೭ರಂದು ರಾತ್ರಿ ೭.೩೦ರ ವೇಳೆಗೆ ಸಿದ್ದೀಕ್ ಎಂಬವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿ ಕಡೆಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಕಣಿಯೂರು ಗ್ರಾಮದ ಪದ್ಮುಂಜದಲ್ಲಿ ರಸ್ತೆ ಬದಿಯಲ್ಲಿ ನಿಂತು ಶರತ್ ಚೌಟ ಫೋನ್ ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಸಿದ್ದಿಕ್ ಅವರನ್ನು ನೋಡಿ ಅವಾಚ್ಯವಾಗಿ ನಿಂದಿಸಿ ಸಿದ್ದಿಕ್ ಅವರ ವಾಹನವನ್ನು ತನ್ನ ಮೋಟಾರ್ ಸೈಕಲ್ ನಲ್ಲಿ ಹಿಂಬಾಲಿಸಿ ಓವರ್ ಟೇಕ್ ಮಾಡಿ ಸಿದ್ದಿಕ್ ಅವರ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿ ಸಿದ್ದೀಕ್ ಅವರ ವಾಹನದ ಡೋರ್ ತೆಗೆದು ಕೀ ತಿರುಗಿಸಿ ಬಂದ್ ಮಾಡಿ ಅವಾಚ್ಯವಾಗಿ ನಿಂದಿಸಿ ತಲೆ ಮತ್ತು ಎದೆಗೆ ಕೈಯಿಂದ ಗುದ್ದಿ ನೋವುಂಟು ಮಾಡಿದ್ದ. ಅಲ್ಲದೆ ನೀನು ಮುಂದಕ್ಕೆ ಸಿಗುತ್ತಿಯಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಿಎ???ಸ್ ಕಲಂ ೧೨೬ (೨), ೧೧೫(೨), ೩೫೨ ಮತ್ತು ೩೫೧(೨)ರಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ತನಿಖಾಧಿಕಾರಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣದ ಸಾಕ್ಷಿ ವಿಚಾರಣೆ ನಡೆಸಿದ ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ. ಅವರು ಆರೋಪಿ ಶರತ್ ಚೌಟನನ್ನು ದೋಷಿ ಎಂದು ತೀರ್ಮಾನಿಸಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಬಿಎನ್‌ಎಸ್ ೧೧೫ (೨)ರ ಅಪರಾಧಕ್ಕೆ ಒಂದು ವರ್ಷ ಸಾದಾ ಜೈಲು ಶಿಕ್ಷೆ, ೫ ಸಾವಿರ ರೂ ದಂಡ , ದಂಡ ಕಟ್ಟಲು ತಪ್ಪಿದರೆ ೩ ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ, ೧೨೬(೨)ರಡಿಯ ಅಪರಾಧಕ್ಕೆ ಒಂದು ತಿಂಗಳು ಜೈಲು ೧ ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದರೆ ೧೦ ದಿನ ಹೆಚ್ಚುವರಿ ಜೈಲು ಶಿಕ್ಷೆ, ೩೫೨ ಮತ್ತು ೩೫೧(೧)ರಡಿಯ ಅಪರಾಧಕ್ಕಾಗಿ ತಲಾ ಒಂದು ವರ್ಷ ಜೈಲು ೩ ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದರೆ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಮೇಲಿನ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಅಲ್ಲದೆ ವಿಧಿಸಿದ ದಂಡದ ಮೊತ್ತವನ್ನು ಬಿಎನ್‌ಎಸ್‌ಎಸ್ ಕಲಂ ೩೯೫ರಡಿ ಸಂತ್ರಸ್ತ ಸಿದ್ದೀಕ್ ಅವರಿಗೆ ಪರಿಹಾರವಾಗಿ ನೀಡಬೇಕೆಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದಿಸಿದ್ದರು. ಅಪರಾಧಿಕಾ ಪರಿವೀಕ್ಷಣಾ ಅಧಿನಿಯಮದಡಿ ಬಿಡುಗಡೆಗೆ ಅರ್ಜಿ-ಕೋರ್ಟ್ ತಿರಸ್ಕಾರ: ಶರತ್ ಚೌಟನನ್ನು ಅಪರಾಧಿಕಾ ಪರಿವೀಕ್ಷಣಾ ಅಧಿನಿಯಮದಡಿ ಬಿಡುಗಡೆ ಮಾಡಬೇಕೆಂದು ಆತನ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸದ್ರಿ ಅರ್ಜಿಗೆ ಅಭಿಯೋಜನಾ ಪರ ಸಹಾಯಕ ಸರ್ಕಾರಿ ಆಭಿಯೋಜಕರಾದ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದ್ದರು. ಆರೋಪಿಯಾಗಿರುವ ಕಣಿಯೂರು ಗ್ರಾಮದ ಅಂತರ ಮನೆಯ ಶರತ್ ಚೌಟ ೧೭-೦೨-೨೦೧೬ರಂದು ಸಂಜೆ ೭.೩೦ಕ್ಕೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುಗೆರೋಡಿ ಎಂಬಲ್ಲಿ ರಾಜೀವ ರೈರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ರಾಜೀವ ರೈರವರ ಪತ್ನಿ ಶಾರದಾ ರೈ ಅವರು ಕಾರಿನಿಂದ ಇಳಿಯುತ್ತಿರುವ ಸಮಯ ಎಡಕೈಯನ್ನು ಹಿಡಿದೆಳೆದು ಮಾನಹಾನಿ ಮಾಡಿ ಬಿಡಿಸಲು ಬಂದ ರಾಜೀವ ರೈಯವರ ಮೇಲೆ ಅಡಿಕೆ ಮರದ ಸಲಾಕೆಯಿಂದ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಪರಾರಿಯಾಗಿದ್ದ ಬಗ್ಗೆ ಈ ಹಿಂದೆ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ೮-೦೯-೨೦೨೧ರಂದು ನ್ಯಾಯಾಲಯ ತೀರ್ಪು ನೀಡಿತ್ತು. ೮-೧೦-೨೦೨೧ರಂದು ಶಿಕ್ಷೆ ಪ್ರಮಾಣ ಘೋಷಣೆಗೆ ದಿನಾಂಕ ನಿಗದಿಪಡಿಸಲಾಗಿತ್ತು ಹಾಗೂ ಆರೋಪಿಯನ್ನು ಅಪರಾಧ ಪರಿವೀಕ್ಷಣಾ ಅಧಿನಿಯಮದಡಿ ಪರಿಗಣಿಸಲಾಗಿತ್ತು. ಈ ಹಿನ್ನಲೆಯಲ್ಲಿ ಆರೋಪಿ ಈ ಹಿಂದೆ ಅಪರಾಧ ಪರಿವೀಕ್ಷಣಾ ಅಧಿನಿಯಮದಡಿ ಪರಿಗಣಿಸಲ್ಪಟ್ಟಿದ್ದರೂ ಮತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಅದು ಅನಿರೀಕ್ಷಿತ ಘಟನೆಯಾಗಿರದೆ, ಉದ್ದೇಶಪೂರ್ವಕವಾಗಿ ಎಸಗಿದ ಅಪರಾಧವಾಗಿದೆ. ಈ ರೀತಿ ಮಾನವನ ಜೀವವನ್ನು ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ನಗಣ್ಯ ಮಾಡುವ ಆರೋಪಿಯು ಮತ್ತೊಮ್ಮೆ ಅಪರಾಧ ಪರಿವೀಕ್ಷಣಾ ಅಧಿನಿಯಮದಡಿ ಪರಿಗಣನೆಗೆ ಅರ್ಹವಾಗಿರುವುದಿಲ್ಲ. ಈಗಾಗಲೇ ಆರೋಪಿ ಅಪರಾಧ ಪರಿವೀಕ್ಷಣಾ ಅಧಿನಿಯಮದ ಲಾಭ ಪಡೆದಿರುತ್ತಾನೆ ಎಂದು ಎಪಿಪಿ ದಿವ್ಯರಾಜ್ ಹೆಗ್ಗೆ ವಾದಿಸಿದ್ದರು. ಇವರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿ ಪರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
