ಬೆಳ್ತಂಗಡಿ: ಉಜಿರೆಯಲ್ಲಿ ಅನುಮತಿ ಪಡೆಯದೆ ಸೌಜನ್ಯ ಪರ ಬ್ಯಾನರ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೇಸು ಎದುರಿಸುತ್ತಿರುವ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರು ನ.೩ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ವಾರಂಟ್ ರೀ ಕಾಲ್ ಮಾಡಿದ್ದಾರೆ.
ಘಟನೆಯ ವಿವರ: ಉಜಿರೆಯಲ್ಲಿ ಅನುಮತಿ ಪಡೆಯದೆ ಸೌಜನ್ಯ ಪರ ಬ್ಯಾನರ್ ಅಳವಡಿಸಿದ್ದ ಘಟನೆಗೆ ಸಂಬಂಧಿಸಿ ಕಳೆದ ವರ್ಷ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ಧ ಕೇಸು ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬಳಿಕ ತನಿಖಾಧಿಕಾರಿಯವರು ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇತ್ತೀಚೆಗೆ ನಡೆದಿದ್ದಾಗ ಇತರ ಆರೋಪಿಗಳು ಹಾಜರಾಗಿದ್ದು ಮಹೇಶ್ ಶೆಟ್ಟಿ ತಿಮರೋಡಿ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮಹೇಶ್ ಶೆಟ್ಟಿಯವರಿಗೆ ವಾರಂಟ್ ಜಾರಿಗೊಳಿಸಿದ್ದರು. ಈ ನಿಟ್ಟಿನಲ್ಲಿ ತಮ್ಮ ಪರ ವಕೀಲರಾದ ಸಿರಾಜುದ್ದೀನ್ ಎ. ಜೋಗಿಬೆಟ್ಟು ಅವರೊಂದಿಗೆ ನ.೩ರಂದು ಮಹೇಶ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ವಾರಂಟ್ ರೀ ಕಾಲ್ ಮಾಡಿದ ನ್ಯಾಯಾಧೀಶ ಸಂದೇಶ್‌ರವರು ಮಹೇಶ್ ಶೆಟ್ಟಿಯವರಿಗೆ ೧೦೦ ರೂ ದಂಡ ವಿಧಿಸಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ ೩೧ಕ್ಕೆ ಮುಂದೂಡಿದ್ದಾರೆ.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಆದೇಶ ಹೊರಡಿಸಿದ ಮತ್ತು ಎಸ್‌ಐಟಿ ಅಧಿಕಾರಿಗಳು ಮನೆಯಲ್ಲಿ ಮಹಜರು ನಡೆಸಿದಾಗ ಬಂದೂಕು ಹಾಗೂ ತಲವಾರು ಪತ್ತೆಯಾದ ಘಟನೆಗೆ ಸಂಬಂಧಿಸಿ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ ಬಳಿಕ ಮಹೇಶ್ ಶೆಟ್ಟಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರು ಯಾವ ಕಾರಣಕ್ಕಾಗಿ ಕೋರ್ಟ್‌ಗೆ ಹಾಜರಾಗಿದ್ದರು ಎಂದು ಕುತೂಹಲ ಸೃಷ್ಟಿಯಾಗಿತ್ತು.
