ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಸಮಾಧಿ ಮಾಡಲಾಗಿದೆ ಎಂದು ಆರೋಪಿಸಿ ಭಾರೀ ಸಂಚಲನ ಎಬ್ಬಿಸಲಾಗಿದ್ದ ಪ್ರಕರಣದಲ್ಲಿ ತಮ್ಮ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಮಹೇಶ್ ಶೆಟ್ಟಿ ತಿಮರೋಡಿ ಬಣ ಹೈಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿ ವಿಚಾರಣೆಗೆ ಪರಿಗಣಿಸಿರುವ ನ್ಯಾಯಾಲಯ ಪ್ರಕರಣದ ಮುಂದಿನ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೆ ತನಿಖೆಯ ಹೆಸರಲ್ಲಿ ಕಿರುಕುಳ ನೀಡದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ನವೆಂಬರ್ ೧೨ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದು ಅಲ್ಲಿಯವರೆಗೆ ತಡೆಯಾಜ್ಞೆ ಮುಂದುವರಿಯಲಿದೆ.
ಸಮನ್ಸ್ ಕಾನೂನು ಬಾಹಿರ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅರ್ಜಿದಾರರಾದ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ವಿಠಲ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ಪೀಠ ಕಳೆದ ಗುರುವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಎಸ್. ಬಾಲನ್ ಅವರು ವಾದ ಮಂಡಿಸಿದ್ದು ಅರ್ಜಿದಾರರಿಗೆ ಈಗಾಗಲೇ ೯ ಬಾರಿ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಅವರನ್ನು ಆರೋಪಿಗಳು ಎಂದು ಉಲ್ಲೇಖಿಸಲಾಗಿಲ್ಲ. ಖುದ್ದಾಗಿ ನೋಟಿಸ್ ಜಾರಿ ಮಾಡದೆ ವಾಟ್ಸಪ್, ಇ-ಮೇಲ್‌ನಲ್ಲಿ ನೀಡಿದ್ದಾರೆ. ಜೊತೆಗೆ ಬಿಎನ್‌ಎಸ್‌ಎಸ್ ಸೆಕ್ಷನ್ ೩೫(೩) ಅಡಿಯಲ್ಲಿ ಸಮನ್ಸ್ ನೀಡಲಾಗಿದೆ. ಎಸ್‌ಐಟಿ ಸಮನ್ಸ್ ನೀಡಿರುವುದು ಕಾನೂನುಬಾಹಿರವಾಗಿದೆ.
ಅರ್ಜಿದಾರರು ಆರೋಪಿಗಳೂ ಅಲ್ಲ, ಸಾಕ್ಷಿಗಳೂ ಅಲ್ಲ ಅಂದ ಮೇಲೆ ಅವರಿಗೆ ಸಮನ್ಸ್ ನೀಡಿರುವುದರ ಹಿಂದಿನ ಉzಶ ಏನು ಎಂದು ಪ್ರಶ್ನಿಸಿದ್ದಾರೆ. ರಾಜಕೀಯ, ಧಾರ್ಮಿಕ, ಸಂಘಟನಾತ್ಮಕ ವೈರತ್ವದಿಂದ ತನಿಖಾ ಸಂಸ್ಥೆ ಮೂಲಕ ಈ ನೋಟಿಸ್‌ಗಳನ್ನು ನೀಡಲಾಗಿದೆ. ಇದೀಗ ೧೦ನೇ ನೋಟಿಸ್ ನೀಡಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಕೂರಿಸುತ್ತಾರೆ. ಈಗಾಗಲೇ ೧೫೦ ಗಂಟೆಗೂ ಅಧಿಕ ಕಾಲ ದೂರುದಾರರನ್ನು ವಿಚಾರಣೆ ನಡೆಸಲಾಗಿದೆ. ಅನೇಕ ಬಾರಿ ಅವರು ಎಸ್‌ಐಟಿ ಕಚೇರಿಗೆ ಹೋಗಿ ಬಂದಿದ್ದಾರೆ ಎಂದು ವಕೀಲ ಬಾಲನ್ ವಿವರಣೆ ನೀಡಿದರು. ಆರಂಭದಲ್ಲಿ ಬಿಎನ್‌ಎಸ್ ಸೆಕ್ಷನ್ ೨೧೧(ಎ) ಅಡಿ ಎಫ್‌ಐಆರ್ ದಾಖಲಿಸಿ ನಂತರ ಬೇರೆ ಸೆಕ್ಷನ್ ಸೇರಿಸಿದ್ದಾರೆ. ಅದೂ ಎರಡೂವರೆ ತಿಂಗಳ ನಂತರ ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಈ ಕಾರಣದಿಂದ ನಾವು ನೊಟೀಸ್‌ಗಳನ್ನು ರದ್ದುಪಡಿಸಬೇಕು ಎಂದು ಕೇಳಿಕೊಳ್ಳುತ್ತಿzವೆ. ಅಲ್ಲದೆ, ಅರ್ಜಿದಾರರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅರ್ಜಿದಾರರು ಆರೋಪಿಗಳೇ? -ಜಡ್ಜ್ ಪ್ರಶ್ನೆ: ವಿಚಾರಣೆ ವೇಳೆ ಅರ್ಜಿದಾರರು ಆರೋಪಿಗಳೇ ಎಂದು ನ್ಯಾಯಾಧೀಶರು ಕೇಳಿದರು. ಅದಕ್ಕೆ ವಕೀಲ ಬಾಲನ್, ಇವರು ಯಾರೂ ಆರೋಪಿಗಳಲ್ಲ. ಹಾಗಿದ್ದರೂ ವಿಚಾರಣೆಗೆ ನೋಟಿಸ್ ನೀಡಿದ್ದಾರೆ ಎಂದರು. ರಾಜಕೀಯ, ಧಾರ್ಮಿಕ, ಸಂಘಟನೆಯ ವೈಷಮ್ಯದಿಂದ ನೋಟಿಸ್ ನೀಡಲಾಗಿದೆ. ಎರಡು ತಿಂಗಳಲ್ಲಿ ೯ ನೋಟಿಸ್ ನೀಡಿದ್ದಾರೆ. ಇದೀಗ ೧೦ನೇ ನೋಟಿಸ್ ನೀಡಿದ್ದಾರೆ ಎಂದರು. ಅರ್ಜಿದಾರರರ ಪರ ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಾಡಿದ ಇನ್ನೋರ್ವ ನ್ಯಾಯವಾದಿ ದೀಪಕ್ ಕೋಸ್ಲಾ ಅವರು ಪ್ರಕರಣ ದಾಖಲಿಸುವಾಗ ಪೊಲೀಸರು ಪ್ರಕ್ರಿಯೆ ಪಾಲಿಸಿಲ್ಲ ಎಂದರು.
ಎಸ್‌ಐಟಿ ಪರ ಜಗದೀಶ್ ವಾದ: ಎಸ್‌ಐಟಿ ಪರವಾಗಿ ಹೆಚ್ಚುವರಿ ರಾಜ್ಯ ಸಾರ್ವಜನಿಕ ಅಭಿಯೋಜಕ ಬಿ.ಎನ್. ಜಗದೀಶ ಅವರು ವಾದ ಮಂಡಿಸಿ ಪೊಲೀಸರು ವಿಚಾರಣೆ ಮಾಡುವ ಸಲುವಾಗಿ ನ್ಯಾಯ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಅವರ ಅನುಮತಿಯನ್ನು ಪಡೆದುಕೊಂಡಿದ್ದಾರೆ.
ಬಿಎನ್‌ಎಸ್‌ಎಸ್‌ನ ೩೫(೩) ಅಡಿಯಲ್ಲಿ ಕಾನೂನಾತ್ಮಕವಾಗಿಯೇ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗಿದೆ. ಅರ್ಜಿದಾರರು ನ್ಯಾಯಾಲಯ, ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಪ್ರಚೋದನೆ ಮೇರೆಗೆ ಚಿನ್ನಯ್ಯ ದೂರು ನೀಡಿದ್ದು ಇದೀಗ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ತಮ್ಮ ಈ ವರ್ತನೆಗಳ ಮೂಲಕ ರಾಜ್ಯದ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಡೀ ವ್ಯವಸ್ಥೆಯ ಮೇಲೆ ಸವಾರಿ ಮಾಡಲು ಹೊರಟಿರುವ ಇಂತಹವರ ವಿರುದ್ಧ ತನಿಖೆ ಮುಂದುವರಿಸಬೇಕು. ಅದಕ್ಕೆ ನೀವು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.
ಮಧ್ಯಂತರ ತಡೆ: ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರಕರಣದ ತನಿಖೆಗೆ ನವೆಂಬರ್ ೧೨ರವರೆಗೆ ಮಧ್ಯಂತರ ತಡೆ ನೀಡಿತು. ದೂರುದಾರರಾಗಿರುವ ವಿಠಲ ಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ. ಜಯಂತ್ ಅವರಿಗೆ ತನಿಖೆಯ ಹೆಸರಲ್ಲಿ ಯಾವುದೇ ಕಿರುಕುಳ ನೀಡದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿತು. ಎಸ್‌ಐಟಿ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಮುಂದಿನ ವಿಚಾರಣೆ ಒಳಗಾಗಿ ಎಲ್ಲರೂ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕಿದೆ.
