Site icon Suddi Belthangady

ನ.೯: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ-ಭಾರೀ ಕುತೂಹಲರಾಜೇಶ್ ಕೆ. ಅವಿರೋಧ ಆಯ್ಕೆ: ಶ್ರವಣ್ ಕುಮಾರ್, ಭುವನೇಶ್, ದಿವಾಕರ್ ಕಣದಲ್ಲಿ

ಬೆಳ್ತಂಗಡಿ: ನವೆಂಬರ್ ೯ರಂದು ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ. ೨೦೨೫-೨೦೨೮ನೇ ಸಾಲಿನ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರ ಆಯ್ಕೆಗಾಗಿ ನ.೯ರಂದು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಚುನಾವಣೆ ನಡೆಯಲಿದ್ದು ಬಿರುಸಿನ ಸ್ಪರ್ಧೆ ಕಾಣಿಸಿಕೊಂಡಿದೆ. ಜಿಲ್ಲಾ ಸಂಘದ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನ ನಾಲ್ವರು ಸ್ಪರ್ಧಿಸಿದ್ದು ಈ ಪೈಕಿ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶ್ರವಣ್ ಕುಮಾರ್ ನಾಳ, ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಭುವನೇಶ್ ಗೇರುಕಟ್ಟೆ ಮತ್ತು ದಿವಾಕರ್ ಪದ್ಮುಂಜ ಸ್ಪರ್ಧಾ ಕಣದಲ್ಲಿದ್ದು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಶ್ರವಣ್ ಕುಮಾರ್ ನಾಳ ಸ್ಪರ್ಧೆ: ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳ ನಿವಾಸಿ ಶ್ರವಣ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಕಳೆದ ೧೨ ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರವಣ್ ಅವರು ಪ್ರಸ್ತುತ ವಿಜಯವಾಣಿ ಪತ್ರಿಕೆಯ ಮಂಗಳೂರು ವಿಭಾಗದ ಹಿರಿಯ ವರದಿಗಾರರಾಗಿದ್ದಾರೆ.

ಸುರತ್ಕಲ್ ಮತ್ತು ಪುತ್ತೂರು ತಾಲೂಕಿನಲ್ಲಿ ಈ ಹಿಂದೆ ವಿಜಯವಾಣಿ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದ ಇವರು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಸ್‌ಡಿಎಂ ಲಾ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಮಂಗಳೂರು ವಿ.ವಿ. ಸಂಶೋಧನಾ ವಿಭಾಗದಲ್ಲಿ ಎಸ್‌ಡಿಎಂನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿರಾಟ್ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸುತ್ತಿದ್ದಾರೆ. ಕಳೆದ ೮ ವರ್ಷಗಳಿಂದ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಣಿ ಮಂಡಳಿ ಸದಸ್ಯನಾಗಿರುವ ಇವರು ಉತ್ತಮ ಕೃಷಿಕರಾಗಿದ್ದು ಹೈನುಗಾರಿಕೆಯಲ್ಲಿ ಹೊಸ ಯೋಜನೆಗಳನ್ನು ತಂದು ಆದಾಯ ವೃದ್ಧಿಯಲ್ಲಿ ಯಶಸ್ವಿಯಾಗಿದ್ದಾರೆ. ವಿವೇಕಾನಂದ ಪತ್ರಿಕೋದ್ಯಮ ವಿಭಾಗ ಸೇರಿದಂತೆ ರಾಜ್ಯದ ೬ ಖಾಸಗಿ ವಿದ್ಯಾಸಂಸ್ಥೆಯ ಬೋರ್ಡ್ ಅಫ್ ಸ್ಟಡಿ ಸದಸ್ಯನಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಶ್ರವಣ್ ಕುಮಾರ್ ನಾಳ ಅವರು ೨೦೨೩ರಲ್ಲಿ ವಿಜಯವಾಣಿಯ ಮಂಗಳೂರು ವಿಭಾಗದ ಹಿರಿಯ ವರದಿಗಾರನಾಗಿ ಪದೋನ್ನತಿ ಹೊಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಡಬ ತಾಲೂಕಿನ ರಾಮಕುಂಜ ಮೂಲದವರಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ವಾಸ್ತವ್ಯ ಇರುವ ವಾರ್ತಾಭಾರತಿ ಪತ್ರಿಕೆಯ ಬ್ಯೂರೋ ಚೀಫ್ ಪುಷ್ಪರಾಜ್ ಬಿ.ಎನ್. ಇವರಿಗೆ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದಾರೆ.
ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಭುವನೇಶ್, ದಿವಾಕರ್ ಪದ್ಮುಂಜ ಸ್ಪರ್ಧೆ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಬೆಳ್ತಂಗಡಿ ತಾಲೂಕಿನ ಭುವನೇಶ್ ಗೇರುಕಟ್ಟೆ ಮತ್ತು ದಿವಾಕರ್ ಪದ್ಮುಂಜ ಸ್ಪರ್ಧಿಸಿದ್ದಾರೆ. ಇವರಲ್ಲಿ ಭುವನೇಶ್ ಗೇರುಕಟ್ಟೆ ಕಳೆದ ೨೬ ವರ್ಷಗಳಿಂದ ಪತ್ರಿಕಾರಂಗದಲ್ಲಿದ್ದಾರೆ. ೧೯೯೯ರಲ್ಲಿ ಬೆಳ್ತಂಗಡಿಯ ಜೈ ಕನ್ನಡಮ್ಮ ವಾರ ಪತ್ರಿಕೆಯಿಂದ ವೃತ್ತಿ ಆರಂಭಿಸಿದ ಇವರು ಬಳಿಕ ದಿನಪತ್ರಿಕೆಗಳಾದ ಹೊಸದಿಂಗತ, ಸಂಯುಕ್ತ ಕರ್ನಾಟಕ, ಜಯಕಿರಣ, ವಿಜಯ ಕರ್ನಾಟಕದಲ್ಲಿ ವರದಿಗಾರರಾಗಿ ದುಡಿದು ಈಗ ಪ್ರತಿನಿಧಿ ಪ್ರತಿಕೆಯಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಕೋಶಾಧಿಕಾರಿಯಾಗಿದ್ದಾರೆ. ದ.ಕ ಜಿಲ್ಲಾ ಸಂಘದಲ್ಲಿ ಕಾರ್ಯಕಾರಿಣಿ ಸದಸ್ಯ, ಎರಡು ಬಾರಿ ಕಾರ್ಯದರ್ಶಿಯಾಗಿರುವ ಇವರು ಈ ಬಾರಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ದಿವಾಕರ್ ಪದ್ಮುಂಜರವರು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮಲೆಂಗಲ್ಲು ನಿವಾಸಿಯಾಗಿದ್ದು ಕಳೆದ ೧೯ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಟಿವಿ ೯, ಝೀ ನ್ಯೂಸ್, ಸಮಯ, ಜನಶ್ರೀ, ಪ್ರಜಾ ಟಿವಿ, ದಿಗ್ವಿಜಯ ವಾಹಿನಿಯಲ್ಲಿ ವೀಡಿಯೋ ಜರ್ನಲಿಸ್ಟ್ ಆಗಿದ್ದ ದಿವಾಕರ್ ಈಗ ರಿಪಬ್ಲಿಕ್ ಕನ್ನಡ ವಾಹಿನಿಯ ದ.ಕ.ಜಿಲ್ಲಾ ವೀಡಿಯೋ ಜರ್ನಲಿಸ್ಟ್ ಆಗಿದ್ದಾರೆ. ೨೦೧೧ರಲ್ಲಿ ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿಗೆ ಸ್ಪರ್ಧಿಸಿ ಆಯ್ಕೆಯಾದ ದಿವಾಕರ್ ಈಗ ಎರಡನೇ ಬಾರಿಗೆ ಕಾರ್ಯಕಾರಿಣಿ ಸಮಿತಿಗೆ ಸ್ಪರ್ಧಿಸುತ್ತಿದ್ದಾರೆ. ಒಟ್ಟು ೧೫ ಮಂದಿ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಬೇಕಿದ್ದು ೨೧ ಮಂದಿ ಚುನಾವಣಾ ಕಣದಲ್ಲಿದ್ದಾರೆ.
ರಾಜೇಶ್ ಕೆ. ಅವಿರೋಧ ಆಯ್ಕೆ: ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಿಲ್ಲೂರಿನವರಾಗಿರುವ ಇವರು ಕಳೆದ ಹದಿನಾರು ವರ್ಷಗಳಿಂದ ವೀಡಿಯೋ ಜರ್ನಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು ೧೪ ವರ್ಷಗಳಿಂದ ಟಿವಿ ೯ ಕನ್ನಡದಲ್ಲಿ ವೀಡಿಯೋ ಜರ್ನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Exit mobile version