ಬೆಳ್ತಂಗಡಿ: ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಬೆಂಗಳೂರು ಇವರು ಅಂತಾರಾಷ್ಟ್ರೀಯ ಶಿಕ್ಷಕ ದಿನಾಚರಣೆಯ ಅಂಗವಾಗಿ ರಾಜ್ಯದ ೧೦೦ ಶಿಕ್ಷಕರಿಗೆ ಉತ್ತಮ ಶಿಕ್ಷಕರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ಇದರಲ್ಲಿ ಉಜಿರೆ ನಿವಾಸಿಯಾಗಿರುವ ಪುತ್ತೂರಿನ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ರಮೇಶ ಮಯ್ಯ ಒಳಗೊಂಡಿದ್ದಾರೆ.
ಇವರಿಗೆ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಡಾ| ಜಯಬಸವ ಮಹಾಸ್ವಾಮಿ ಮತ್ತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆರವರ ಉಪಸ್ಥಿತಿಯಲ್ಲಿ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಮೇಶ್ ಮಯ್ಯ ಅವರು ೧೯೯೬ರಲ್ಲಿ ಉಜಿರೆ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಗೆ ಶಿಕ್ಷಕರಾಗಿ ಸೇರ್ಪಡೆಗೊಂಡಿದ್ದು ೨೦೨೨ರಲ್ಲಿ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಆಡಳಿತಕ್ಕೆ ಒಳಪಟ್ಟ ಕಾಂಚನ ಶ್ರೀ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಗೆ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡಿದ್ದರು. ಸುಮಾರು ೩೯ ವರ್ಷಗಳಿಂದ ಶಿಕ್ಷಕ ವೃತ್ತಿ ನಡೆಸುತ್ತಿರುವ ಇವರು ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಉತ್ತಮ ಫಲಿತಾಂಶ, ರಾಷ್ಟ್ರಮಟ್ಟಕ್ಕೆ ಕ್ರೀಡಾ ವಿದ್ಯಾರ್ಥಿಗಳ ಆಯ್ಕೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಲು ಕಾರಣಕರ್ತರಾಗಿದ್ದಾರೆ.
ಬೆಳ್ತಂಗಡಿ ತಾಲೂಕು ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸತತ ೧೨ ವರ್ಷ ಸೇವೆ, ಎನ್‌ಸಿಸಿ ಆರ್ಮಿ ಅಧಿಕಾರಿಯಾಗಿ ೨೩ ವರ್ಷಗಳ ಸೇವೆ, ಅಖಿಲ ಭಾರತಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ರಾಜ್ಯ ಸಮಾವೇಶವನ್ನು ಯಶಸ್ವಿಯಾಗಿ ಆಯೋಜನೆ, ಅಭಾಸಾಪದ ಜಿಲ್ಲಾ ಪ್ರತಿನಿಧಿಯಾಗಿ ಸೇವೆ, ಚಂದನ ಟಿವಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಬಹುಮಾನ ಪಡೆದಿರುವುದು, ೨೦೦೧ರಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಉದಯ ಟಿವಿ ಪ್ರಾಯೋಜಿತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ, ರಾಜ್ಯಮಟ್ಟದ ರಸಪ್ರಶ್ನೆ ನಿರ್ವಹಣೆ, ಶಿಕ್ಷಕರಿಗಾಗಿ ನಡೆಯುವ ಭಾವಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ, ಪ್ರತಿಭಾ ಕಾರಂಜಿ, ಯುವಜನ ಮೇಳ ಸ್ಪರ್ಧಾ ನಿರ್ಣಾಯಕರಾಗಿ ಸೇವೆ, ಕೂಟ ಮಹಾಜಗತ್ತಿನ ಬೆಳ್ತಂಗಡಿ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರಮೇಶ್ ಮಯ್ಯ ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿಯಾಗಿದ್ದಾರೆ.
